ಚಿಕ್ಕಮಗಳೂರು: ನನಗೆ ಕ್ಷೇತ್ರದ ಜನತೆ ನೀಡಿರುವ ಪ್ರೀತಿಗೆ ಪ್ರತಿಯಾಗಿ ಕೊನೆಯ ಉಸಿರು ಇರುವವರೆಗೂ ಎಲ್ಲರಲ್ಲೂ ಒಂದಾಗಿ ನನ್ನ ನೆಲದಲ್ಲಿಯೇ ಮಣ್ಣಾಗುತ್ತೇನೆ. ನನ್ನ ಅನೇಕ ತಪ್ಪುಗಳಿಗೆ ಜನ ಸರಿಯಾದ ಶಿಕ್ಷೆ ನೀಡಿದ್ದಾರೆ. ತಪ್ಪು ಮಾಡಿದ ನಾನು ಪ್ರಾಯಶ್ಚಿತ್ತ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದೇನೆ ಎಂದು ಕಡೂರು ಮಾಜಿ ಶಾಸಕ ವೈ.ಎಸ್.ವಿ. ದತ್ತ ಹೇಳಿದ್ದಾರೆ.
ಕಡೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜೂನ್ 24ರಂದು ನನ್ನ ಜನ್ಮದಿನವಾಗಿದ್ದು, ಅಂದಿನಿಂದ ಕ್ಷೇತ್ರದ ಪ್ರತಿ ಹಳ್ಳಿಗೆ ಪಾದಯಾತ್ರೆ ಮೂಲಕ ತೆರಳಿ ಜನರ ಕ್ಷಮೆ ಕೋರುತ್ತೇನೆ. ಪಾದಯಾತ್ರೆ ವೇಳೆ ಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಯಾವುದೇ ಚುನಾವಣೆ ದೃಷ್ಟಿಯಿಂದ ನಾನು ಇದನ್ನು ಮಾಡುತ್ತಿಲ್ಲ. ನನ್ನ ಆತ್ಮಾವಲೋಕನಕ್ಕಾಗಿ ಪ್ರಾಯಶ್ಚಿತ್ತ ಪಾದಯಾತ್ರೆ ಮಾಡುತ್ತಿದ್ದೇನೆ ಎಂದು ದತ್ತ ತಿಳಿಸಿದ್ದಾರೆ.
ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸುವ ವೈ.ಎಸ್.ವಿ. ದತ್ತ ಅವರ ನಿರ್ಧಾರಕ್ಕೆ ಸಂಸದ ಪ್ರಜ್ವಲ್ ರೇವಣ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ನಿವೃತ್ತಿ ಮಾತನಾಡಬೇಡಿ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದು, ಕಡೂರಿನಲ್ಲಿ ದತ್ತ ಅವರ ಸೋಲು ಕೇವಲ ಅವರೊಬ್ಬರ ಸೋಲಲ್ಲ, ಅದು ನಮ್ಮೆಲ್ಲರ ಸೋಲು. ಎಲ್ಲರೂ ಸೇರಿ ದತ್ತ ಅವರಿಗೆ ಸಹಕಾರ ನೀಡೋಣ ಎಂದು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.