ಸೋಶಿಯಲ್ ಮೀಡಿಯಾ ತುಂಬಾ ಪ್ರಭಾವಶಾಲಿ ಮಾಧ್ಯಮ. ಸಿನೆಮಾ ನಟ-ನಟಿಯರಿಗೆ ಹೇಗೆ ಅಭಿಮಾನಿಗಳು ಇರ್ತಾರೋ, ಅದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡೋ ಯೂಟ್ಯೂಬರ್ಗಳಿಗೂ ಅಭಿಮಾನಿಗಳಿರುತ್ತಾರೆ. ಇತ್ತೀಚೆಗೆ ಉತ್ತರ ಪ್ರದೇಶದ ನೋಯ್ಡಾದಲ್ಲಿನ ಸೆಕ್ಟರ್ 51ರ ಮೆಟ್ರೋ ನಿಲ್ದಾಣದಲ್ಲಿ ಸೇರಿದ್ದ ಜನಸಾಗರ ನೋಡಿದ್ದಿದ್ರೆ, ಎಂಥವರೂ ದಂಗಾಗಿ ಬಿಡೋರು.
ಅಲ್ಲಿ ಸೇರಿದ್ದ ಸಾವಿರಾರು ಜನ ತಮ್ಮ ಫೇವರೇಟ್ ಯುಟ್ಯೂಬರ್ ತನೇಜ ಎಂಬಾತನ ಹುಟ್ಟುಹಬ್ಬ ಆಚರಿಸಲು ಒಂದೆಡೆ ಸೇರಿದ್ದರು. ಅದರ ಪರಿಣಾಮ ತನೇಜನನ್ನ ಸ್ಥಳೀಯ ಪೊಲೀಸರು ಬಂಧಿಸಿದ್ದರು.
ನೋಯ್ಡಾ ಮೆಟ್ರೋ ನಿಲ್ದಾಣದಲ್ಲಿ ತನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳ ಜತೆ ಆಚರಣೆ ಮಾಡುವುದಾಗಿ ತನೇಜ ತನ್ನ ಇನ್ಸ್ಟಾಗ್ರಾಮ್ನಲ್ಲಿ ಹೇಳಿಕೊಂಡಿದ್ದ. ತನೇಜ ಅಭಿಮಾನಿಗಳೀಗೆ ಈ ವಿಷಯ ಗೊತ್ತಾಗಿದ್ದೇ ತಡ ಈತನನ್ನ ನೋಡಲು ಸೆಕ್ಟರ್51ರ ಮೆಟ್ರೋ ನಿಲ್ದಾಣದ ಬಳಿ ಸಾವಿರಾರು ಜನ ಸೇರಿದ್ದರು.
ಸಿಆರ್ಪಿಸಿಯ ಸೆಕ್ಷನ್ 144 ಜಾರಿಯಾದ ಕೂಡಲೇ ತನೇಜ ಅವರನ್ನು ಪೊಲೀಸರು ನಿಷೇಧಾಜ್ಞೆ ಉಲ್ಲಂಘನೆ ಮಾಡಿದ ಆರೋಪದಲ್ಲಿ ವಶಕ್ಕೆ ಪಡೆದಿದ್ದರು. ಎರಡು ಗಂಟೆಗಳ ಬಳಿಕ ಐಪಿಸಿ ಸೆಕ್ಷನ್ 241 ಮತ್ತು ಸೆಕ್ಷನ್ 188 (ಸಾರ್ವಜನಿಕ ಸೇವಕರು ಕಾನೂನಾತ್ಮಕವಾಗಿ ಹೊರಡಿಸಿದ ಆದೇಶದ ಉಲ್ಲಂಘನೆ) ಪ್ರಕರಣಗಳ ಅಡಿ ಬಂಧಿಸಿದರು. ಬಳಿಕ ಇವರನ್ನ ಬಿಡುಗಡೆ ಮಾಡಲಾಯಿತು.
ತನೇಜ ಹುಟ್ಟು ಹಬ್ಬ ಆಚರಣೆಗೆ ಅಭಿಮಾನಿಗಳೆಲ್ಲರೂ ಬರುವಂತೆ ತನೇಜ ಪತ್ನಿ ರೀತು ರಾಥಿ ಅಭಿಮಾನಿಗಳಿಗೆ ಆಹ್ವಾನ ಕೊಟ್ಟಿದ್ದರು. ಇನ್ಸ್ಟಾಗ್ರಾಮ್ನಲ್ಲಿ 1.6 ಮಿಲಿಯನ್ ಹಿಂಬಾಲಕರನ್ನ ಹೊಂದಿರುವ ರೀತು ಜನ್ಮದಿನ ಆಚರಣೆಗಾಗಿ ಮೆಟ್ರೋ ನಿಲ್ದಾಣದ ಬಳಿ ಹೋಗಿ ನೋಡಿದಾಗ ಖುದ್ದು ಅವರೇ ದಂಗಾಗಿ ಹೋಗಿದ್ದರು. ಆ ಮಟ್ಟದ ಜನಸಾಗರ ಅಲ್ಲಿ ಸೇರಿದ್ದರು.