ಖ್ಯಾತ ಯೂಟ್ಯೂಬರ್ ಹಾಗೂ ಪ್ರಧಾನಿ ಮೋದಿ ಅವರ ಕಡು ಟೀಕಾಕಾರ ಎಂದೇ ಹೆಸರಾಗಿರುವ ಧೃವ್ ರಾಠಿ, ಭಾರತ, ಸರ್ವಾಧಿಕಾರದತ್ತ ಸಾಗುತ್ತಿದೆಯೇ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಈ ಹಿಂದೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಇದು ಕೋಟ್ಯಾಂತರ ವೀಕ್ಷಣೆಯನ್ನು ಕಂಡಿತ್ತು. ಇದರಲ್ಲಿ ಪ್ರಧಾನಿ ಮೋದಿ ಹಾಗೂ ಅವರ ಸರ್ಕಾರವನ್ನು ಧ್ರುವ್ ರಾಠಿ ಕಟುವಾಗಿ ಟೀಕಿಸಿದ್ದರು. ಇದೀಗ ಅವರು ಈ ವಿಡಿಯೋದ ಮುಂದುವರೆದ ಭಾಗವನ್ನು ಅಪ್ಲೋಡ್ ಮಾಡಿದ್ದು ಇದು ಕೂಡ ಭಾರೀ ವೈರಲ್ ಆಗಿದೆ.
ಧ್ರುವ್ ರಾಠಿ ತಮ್ಮ ಎರಡನೇ ವಿಡಿಯೋದಲ್ಲಿ ಕೇಜ್ರಿವಾಲ್ ಬಂಧನ, ಎಲೆಕ್ಟ್ರೋಲ್ ಬಾಂಡ್, ಐಟಿ, ಇಡಿ ದುರ್ಬಳಕೆ ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಿದ್ದು, ಇದರ ಜೊತೆಗೆ ತಾವು ಶೀಘ್ರದಲ್ಲೇ ಭಾರತಕ್ಕೆ ಬರುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಧೃವ್ ರಾಠಿ ಸಾಮಾಜಿಕ ಜಾಲತಾಣವಾದ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹಾಕಿದ್ದು, ಅದರಲ್ಲಿ ಇಂಡಿಯಾ ಗೇಟ್ ಮುಂದೆ ನಿಂತಿರುವುದನ್ನು ಕಾಣಬಹುದು. ಈ ಹಿಂದೆ ಪ್ರಧಾನಿ ಮೋದಿ ಬೆಂಬಲಿಗರು ಭಾರತಕ್ಕೆ ಬಂದು ವಿಡಿಯೋ ಮಾಡಿ ಎಂದು ಹಾಕಿದ್ದ ಸವಾಲನ್ನು ಧ್ರುವ್ ರಾಠಿ ಸ್ವೀಕರಿಸಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
ಧ್ರುವ್ ರಾಠಿ ವಿದೇಶದಲ್ಲಿದ್ದುಕೊಂಡು ಪ್ರಧಾನಿ ಮೋದಿ ಹಾಗೂ ಅವರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆಂದು ಹಲವರು ಆರೋಪ ಮಾಡಿದ್ದರು. ಇದೀಗ ಲೋಕಸಭಾ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ ಧ್ರುವ್ ರಾಠಿ ಭಾರತಕ್ಕೆ ಮರಳುತ್ತಿರುವುದು ಅಚ್ಚರಿ ಮೂಡಿಸಿದೆ. ಮತ್ತೊಂದು ಇಂಟರೆಸ್ಟಿಂಗ್ ಸಂಗತಿ ಎಂದರೆ ಸೋಮವಾರದಂದು ಲೈವ್ ಸ್ಟ್ರೀಮ್ ಮಾಡಲಾದ ವಿಡಿಯೋದಲ್ಲಿ ಧ್ರುವ್ ರಾಠಿ, ಮೋದಿಯವರ ಮತ್ತೊಬ್ಬ ಟೀಕಾಕಾರ ಸ್ಟ್ಯಾಂಡಪ್ ಕಾಮಿಡಿಯನ್ ಕುನಾಲ್ ಕಮ್ರಾ, ಚೆಸ್ ಆಟಗಾರ ಸಾಗರ್ ಷಾ ಹಾಗೂ ಕಾಮಿಡಿಯನ್ ಸಮಯ್ ರೈನಾ ಅವರ ಜೊತೆ ಕಾಣಿಸಿಕೊಂಡಿರುವುದು ಗಮನಾರ್ಹ ಸಂಗತಿ.