
ಹರಿಯಾಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಗಡ್ಕರಿ, ಕೋವಿಡ್ 19 ಸಮಯದಲ್ಲಿ ನಾನು 2 ಕೆಲಸಗಳನ್ನು ಮಾಡುತ್ತಿದ್ದೆ. ಒಂದು ಮನೆಯಲ್ಲಿಯೇ ಅಡುಗೆ ಮಾಡುತ್ತಿದ್ದೆ ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಉಪನ್ಯಾಸ ನೀಡುತ್ತಿದ್ದೆ. ಆನ್ಲೈನ್ನಲ್ಲಿ ನನ್ನ ಸಾಕಷ್ಟು ಉಪನ್ಯಾಸಗಳನ್ನು ಹರಿಬಿಟ್ಟಿದ್ದೇನೆ. ಇವೆಲ್ಲವನ್ನೂ ನಾನು ಯುಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡುತ್ತಿದ್ದೆ. ಯುಟ್ಯೂಬ್ ಈಗ ನನಗೆ ತಿಂಗಳಿಗೆ 4 ಲಕ್ಷ ರೂಪಾಯಿ ನೀಡುತ್ತಿದೆ ಎಂದು ಹೇಳಿದ್ದಾರೆ.
ತಮ್ಮ ಹಳೆಯ ದಿನಗಳನ್ನು ನೆನೆದ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ಗಡ್ಕರಿ, ಹಿಂದೊಮ್ಮೆ ತಾವು ತಮ್ಮ ಪತ್ನಿಗೆ ಹೇಳದೆಯೇ ತಮ್ಮ ಮಾವನ ಮನೆಯನ್ನೇ ಕೆಡವಲು ಆದೇಶ ನೀಡಿದ್ದಾಗಿ ಹೇಳಿದರು.
ನಾನು ಹೊಸದಾಗಿ ಮದುವೆಯಾಗಿದ್ದೆ. ನನ್ನ ಮಾವನ ಮನೆ ರಸ್ತೆಯ ಮಧ್ಯದಲ್ಲಿ ನಿರ್ಮಾಣವಾಗಿತ್ತು. ಈ ವಿಚಾರವನ್ನು ನನ್ನ ಪತ್ನಿಗೆ ತಿಳಿಸದೇ ನನ್ನ ಮಾವನ ಮನೆಯನ್ನು ಕೆಡವಲು ಆದೇಶ ನೀಡಿದ್ದೆ ಎಂದು ತಿಳಿಸಿದ್ದಾರೆ.
ಹರಿಯಾಣ ಸಿಎಂ ಮನೋಹರ ಲಾಲ್ ಖಟ್ಟರ್, ಗುರುಗ್ರಾಮದ ಲೋಕಸಭಾ ಸದಸ್ಯ ರಾವ್ ಇಂದರ್ಜೀತ್ ಸಿಂಗ್ ಹಾಗೂ ಹರಿಯಾಣ ಸರ್ಕಾರದ ಹಿರಿಯ ಅಧಿಕಾರಿಗಳು ಕೂಡ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ದೆಹಲಿ – ಮುಂಬೈ ಎಕ್ಸ್ಪ್ರೆಸ್ ವೇ ಸುಮಾರು 95000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಮಾರ್ಚ್ 2023ರ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಲೋಡ್ಕಿ ಗ್ರಾಮದಲ್ಲಿ ಕಾಮಗಾರಿ ಪರಿಶೀಲನೆ ನಡೆಸಿದ ಗಡ್ಕರಿ ಬಹುಪಾಲು ಕೆಲಸಗಳನ್ನು ಗುತ್ತಿಗೆದಾರರಿಗೆ ನೀಡಿದ್ದೇವೆ ಎಂದು ಹೇಳಿದರು.
ಈ ಎಕ್ಸ್ಪ್ರೆಸ್ ವೇನ ಸುಮಾರು 166 ಕಿಲೋಮೀಟರ್ ಕೆಲಸವು ಹರಿಯಾಣದಲ್ಲೇ ಬರಲಿದೆ. ಇದು 2022ರ ಮಾರ್ಚ್ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಗಡ್ಕರಿ ಹೇಳಿದ್ದಾರೆ. ದೆಹಲಿಯಿಂದ ರಾಜಸ್ಥಾನದ ದೌಸಾ ಹಾಗೂ ವಡೋದರಾದಿಂದ ಅಂಕಲೇಶ್ವರವರೆಗಿನ ರಸ್ತೆಯ 1 ಭಾಗವು ಮುಂದಿನ ವರ್ಷದ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.