ಕೊರೊನಾ ಇಡೀ ವಿಶ್ವವನ್ನು ಬದಲಿಸಿದೆ. ಕೊರೊನಾ ಮೊದಲ ಅಲೆಗಿಂತ ಎರಡನೇ ಅಲೆ ಸಾಕಷ್ಟು ನಷ್ಟಕ್ಕೆ ಕಾರಣವಾಗಿದೆ. ಎರಡನೇ ಅಲೆ ನಂತ್ರ ಮತ್ತೆ ಆರ್ಥಿಕತೆಯಲ್ಲಿ ನಿಧಾನವಾಗಿ ಸುಧಾರಣೆ ಕಂಡು ಬರ್ತಿದೆ. ಭಾರತದ ಆರ್ಥಿಕತೆಯೂ ಚೇತರಿಸಿಕೊಳ್ತಿದೆ. ಕಚೇರಿಗಳು ತೆರೆಯಲಾರಂಭಿಸಿವೆ. ದೇಶದ ಕಾರ್ಪೊರೇಟ್ ಕಂಪನಿಗಳಲ್ಲೂ ಹೊಸದಾಗಿ ನೇಮಕಾತಿ ಆರಂಭವಾಗಿದೆ. ಇದ್ರಿಂದಾಗಿ ಉದ್ಯೋಗಾವಕಾಶ ಹೆಚ್ಚಾಗಿದೆ.
ವರದಿಯ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ, 2021ರ ಮೂರನೇ ತ್ರೈಮಾಸಿಕದಲ್ಲಿ ಹೊಸ ಉದ್ಯೋಗಾವಕಾಶಗಳಲ್ಲಿ ಶೇಕಡಾ 14ರಷ್ಟು ಹೆಚ್ಚಳವಾಗಿದೆ. ಇಂಜಿನಿಯರಿಂಗ್ ಮತ್ತು ಉತ್ಪಾದನಾ ವಲಯದಲ್ಲಿ ಗರಿಷ್ಠ ನೇಮಕಾತಿ ನಡೆದಿದೆ. ತಂತ್ರಜ್ಞಾನ ಕ್ಷೇತ್ರ ಕೂಡ ಇದ್ರಿಂದ ಹಿಂದೆ ಬಿದ್ದಿಲ್ಲ.
ವರದಿ ಪ್ರಕಾರ, ತಂತ್ರಜ್ಞಾನ ಕ್ಷೇತ್ರದಲ್ಲಿ ಶೇಕಡಾ 58ರಷ್ಟು ಉದ್ಯೋಗಾವಕಾಶಗಳು ಹೆಚ್ಚಿವೆ. ಕಾನೂನು ವಲಯದಲ್ಲಿ ಶೇಕಡಾ 35ರಷ್ಟು ಹೆಚ್ಚಳವಾಗಿದೆ. ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಶೇಕಡಾ 25 ರಷ್ಟು ಹೆಚ್ಚಳವಾಗಿದೆ. ಆರ್ಥಿಕ ಸುಧಾರಣೆ ಹಾಗೂ ಕೊರೊನಾ ಲಸಿಕೆ ಇದಕ್ಕೆ ಕಾರಣ ಎನ್ನಲಾಗ್ತಿದೆ.
ಫೆಬ್ರವರಿ-ಮಾರ್ಚ್ 2021ರಲ್ಲಿ ಕಂಪನಿಗಳಲ್ಲಿ ನೇಮಕಾತಿ ನಡೆದಿತ್ತು. ಆದ್ರೆ ಎರಡನೇ ಅಲೆ ಎಲ್ಲದಕ್ಕೂ ತಣ್ಣೀರೆರಚಿತ್ತು. ನೇಮಕಾತಿಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿತ್ತು. ಕೊರೊನಾ ಎರಡನೇ ಅಲೆ ನಂತ್ರ ಅಂದ್ರೆ ಸೆಪ್ಟೆಂಬರ್ ನಲ್ಲಿ ಮತ್ತೆ ನೇಮಕಾತಿ ವೇಗ ಪಡೆದಿದೆ.