ಮಂಗಳೂರು: ಕೆಲಸವನ್ನು ಹುಡುಕಿಕೊಂಡು ದಕ್ಷಿಣ ಕನ್ನಡದ ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ಯುವಕರ ಗುಂಪನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ನಿಗೂಢ ಕೆಲಸಕ್ಕೆಂದು ಯುವಕರ ತಂಡ ಬೆಂಗಳೂರಿಗೆ ಹೊರಟಿತ್ತು. ಯುವಕರ ನಡೆ ಬಗ್ಗೆ ಅನುಮಾನ ಕಂಡುಬಂದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಧರ್ಮಸ್ಥಳ ಪೊಲೀಸರು ಯುವಕರ ಗುಂಪನ್ನು ಬಂಧಿಸಿದ್ದಾರೆ.
ಬಂಧಿತ ಯುವಕರನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ಅಕ್ರಮ ಸಿಮ್ ಕಾರ್ಡ್ ಸಾಗಾಟ ಮಾಡುತ್ತಿರುವ ಬಗ್ಗೆ ಬಯಲಿಗೆ ಬಂದಿದೆ. ಐದು ಯುವಕರು 42 ಅಕ್ರಮ ಸಿಮ್ ಗಳನ್ನು ಬೆಂಗಳೂರಿಗೆ ಸಾಗಿಸುತ್ತಿದ್ದರು. ದಕ್ಷಿಣ ಕನ್ನಡದ ನೆರಿಯ ಗ್ರಾಮದಲ್ಲಿ ಯುವಕರನ್ನು ಬಂಧಿಸಿ ಸಿಮ್ ಗಳನ್ನು ಜಪ್ತಿ ಮಾಡಲಾಗಿದೆ.
ಬಂಧಿತರನ್ನು ರಮೀಝ್ (20), ಅಕ್ಬರ್ ಅಲಿ (24), ಮೊಹಮ್ಮದ್ ಮುಸ್ತಫಾ (22), ಮೊಹಮ್ಮದ್ ಸಾಧಿಕ್ (27) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ 17 ವರ್ಷದ ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕನೂ ಇದ್ದಾನೆ.
ಯುವಕ ಅಕ್ಬರಿ ಅಲಿ ಎಂಬಾತ ದುಬೈನಲ್ಲಿದ್ದಾಗ ಬೇರೆಯವರ ಹೆಸರಲ್ಲಿ ಈ ಸಿಮ್ ಗಳನ್ನು ಖರೀದಿಸಿದ್ದ. ಬೆಂಗಳೂರಿನಲ್ಲಿರುವ ಆಗಂತುಕರ ಕೈಗೆ ಈ ಸಿಮ್ ಗಳು ಸೇರುತ್ತಿತ್ತೆ? ಎಂಬ ಅನುಮಾನ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ