
ಈಜಲು ಹೋಗಿದ್ದ ಯುವಕನೊಬ್ಬ ಸ್ನೇಹಿತರ ಎದುರೇ ನದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಮಹಾರಾಷ್ಟ್ರದ ರತ್ನಗಿರಿಯಲ್ಲಿ ನಡೆದಿದೆ.
ಮಹಾರಾಷ್ಟ್ರದಾದ್ಯಂತ ಭಾರಿ ಮಳೆಯಾಗುತ್ತಿದ್ದು, ಜಲಾಶಯಗಳು ಭರ್ತಿಯಾಗಿದ್ದು, ನದಿಗಳು ಅಪಾಯದಮಟ್ಟದಲ್ಲಿ ಹರಿಯುತ್ತಿವೆ. ರತ್ನಗಿರಿ ಜಿಲ್ಲೆ ಸೇರಿದಂತೆ ಹಲವೆಡೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಎಚ್ಚರಿಕೆ ನೀಡಿದರೂ ನಿರ್ಲಕ್ಷ್ಯ ಮಾಡಿ ನದಿಯಲ್ಲಿ ಈಜಲು ಇಳಿದಿದ್ದ ಯುವಕ ದುರಂತಕ್ಕೀಡಾಗಿದ್ದಾನೆ.
ನೀರುಪಾಲಾದ ಯುವಕನನ್ನು ಜಯೇಶ್ ರಾಮಚಂದ್ರ ಅಂಬೆ (32) ಎಂದು ಗುರುತಿಸಲಾಗಿದೆ. ಸ್ನೇಹಿತರೊಂದಿಗೆ ನದಿ ಬಳಿ ಬಂದಿದ್ದ ಯುವಕ ಈಜಲೆಂದು ನದಿಗೆ ಇಳಿದಿದ್ದಾನೆ. ನದಿಯಲ್ಲಿ ಏಕಾಏಕಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ನೋಡ ನೋಡುತ್ತಿದ್ದಂತೆ ಯುವಕ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಆತನನ್ನು ರಕ್ಷಿಸಲು ಯುವಕರು ಪ್ರಯತ್ನಿಸಿದ್ದರಾದರೂ ಸಾಧ್ಯವಾಗಿಲ್ಲ. ಸ್ಥಳಕ್ಕೆ ರಕ್ಷಣಾ ತಂಡ ಧಾವಿಸಿದ್ದು, ಯುವಕನಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.