ಲೈಂಗಿಕ ಅಪರಾಧದ ಸಂಸತ್ರಸ್ತೆಯೊಬ್ಬರ ಪಾಡು ಕಂಡು ಮುಮ್ಮಲ ಮರುಗಿದ ಚೆನ್ನೈನ ಯುವಕರೊಬ್ಬರು ಈ ವಿಚಾರವಾಗಿ ಜಾಗೃತಿ ಮೂಡಿಸಲು ದೇಶಾದ್ಯಂತ ನಡಿಗೆ ಅಭಿಯಾನಕ್ಕೆ ಮುಂದಾಗಿದ್ದಾರೆ.
22 ವರ್ಷದ ಸಾಯಿ ರಾಘುಲ್ ಹೆಸರಿನ ಈ ಯುವಕ ನವೆಂಬರ್ 16ರಂದು ಚೆನ್ನೈನಿಂದ ತಮ್ಮ ನಡಿಗೆ ಆರಂಭಿಸಿದ್ದು, 14 ದಿನಗಳ ಬಳಕ ಪಶ್ಚಿಮ ಬಂಗಾಳ ತಲುಪಿದ್ದಾಗಿ ಹೇಳಿಕೊಂಡಿದ್ದಾರೆ.
ವಿದ್ಯಾಥಿನಿಯೊಬ್ಬಳ ಆತ್ಮಹತ್ಯೆಯ ಪ್ರಕರಣದಲ್ಲಿ ಖಾಸಗಿ ಶಾಲೆಯೊಂದರ ಪ್ರಾಂಶುಪಾಲನಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಸಂತ್ರಸ್ತೆ ವಿದ್ಯಾರ್ಥಿನಿ ಮೇಲೆ ಪ್ರಾಂಶುಪಾಲ ಅತ್ಯಾಚಾರಗೈದಿದ್ದ ಎಂಬ ಆರೋಪವಿದೆ.
“ನಾನೊಬ್ಬ ಸಾಫ್ಟ್‌ವೇರ್ ಡೆವಲಪರ್. ಈ ಘಟನೆ ನನ್ನನ್ನು ಬಹಳ ಬೇಸರಕ್ಕೆ ತಳ್ಳಿದ್ದು, ನಾನೀಗ ಎರಡು ತಿಂಗಳ ಮಟ್ಟಿಗೆ ಜನಜಾಗೃತಿ ಮೂಡಿಸಲು ಹೊರಟಿರುವೆ. ಚೆನ್ನೈನಿಂದ ಆರಂಭಗೊಂಡ ನನ್ನ ಈ ಅಭಿಯಾನವು ಆಂಧ್ರ ಪ್ರದೇಶ, ತೆಲಂಗಾಣ, ಛತ್ತೀಸ್‌ಘಡ, ಒಡಿಶಾಗಳನ್ನು ಹಾದು ಈಗ ಪಶ್ಚಿಮ ಬಂಗಾಳ ತಲುಪಿದೆ. ನಾನೀಗ ಸಿಕ್ಕಿಂನತ್ತ ಹೊರಟಿದ್ದೇನೆ,” ಎನ್ನುವ ಸಾಯಿ ತಮ್ಮೊಂದಿಗೆ ಟೆಂಟ್ ಅನ್ನು ಕೊಂಡೊಯ್ಯುತ್ತಿದ್ದು, ದಣಿವಾದಾಗೆಲ್ಲಾ ಅದರೊಳಗೆ ಮಲಗಿ ವಿಶ್ರಮಿಸುತ್ತಾರೆ.
ಸಾಯಿರ ಈ ಅಭಿಯಾನವನ್ನು ಬಹಳ ಮಂದಿ ಮೆಚ್ಚಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಡಾರ್ಜಿಂಲಿಂಗ್ ವಲಯದ ಡಿಐಜಿ ಅಮಿತ್ ಜವಾಲ್ಗಿ, “ಮೀಟಿಂಗ್‌ಗೆ ಹೋಗುತ್ತಿದ್ದ ವೇಳೆ ಸಾಯಿ ಹಿಡಿದಿದ್ಧ ಭಿತ್ತಿ ಪತ್ರ ಕಂಡು ನಾನು ಆತನೊಂದಿಗೆ ಮಾತನಾಡಿದೆ. ಇಂಥ ಅಪರಾಧಗಳಿಂದ ಹುಡುಗನಿಗೆ ಭಾವುಕವಾದ ಸಂವೇದನೆ ಮೂಡಿದೆ ಎಂದು ನನಗೆ ತಿಳಿಯಿತು. ಆತ ಇಲ್ಲಿ ಉಳಿದುಕೊಳ್ಳಲು ನಾನು ವ್ಯವಸ್ಥೆ ಮಾಡಿದ್ದು, ಆತನ ಈ ಪ್ರಯಾಣದ ನಡುವೆ ಸುರಕ್ಷತೆ ಖಾತ್ರಿ ಪಡಿಸಲು ನನ್ನ ದೂರವಾಣಿ ಸಂಖ್ಯೆಯನ್ನು ಹಂಚಿಕೊಂಡಿದ್ದೇನೆ,” ಎಂದು ಹೇಳಿದ್ದಾರೆ.