
ಮಂಡ್ಯ: ಮಂಡ್ಯ ನಗರದಲ್ಲಿ ಸೋಮವಾರ ರಾತ್ರಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಈ ಸಂದರ್ಭದಲ್ಲಿ ಕಾರ್ ಮೇಲೆ ಮರ ಬಿದ್ದು ಯುವಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮೂರು ಇಲಾಖೆಗಳ ವಿರುದ್ಧ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾಸ್ಪತ್ರೆ ರಸ್ತೆಯಲ್ಲಿ ಕಾರ್ ಮೇಲೆ ಮರವನ್ನು ಬುಡ ಸಹಿತ ಉರುಳಿ ಬಿದ್ದಿದ್ದು, ವಾಹನದಲ್ಲಿದ್ದ ಮಂಡ್ಯ ತಾಲೂಕು ಜಿ. ಬೊಮ್ಮನಹಳ್ಳಿ ಗ್ರಾಮದ ನಿವಾಸಿ ಕಾರ್ತಿಕ್(27) ಮೃತಪಟ್ಟಿದ್ದರು. ಇಲಾಖೆಗಳು ಸರಿಯಾದ ಜವಾಬ್ದಾರಿ ನಿರ್ವಹಣೆ ಮಾಡದ ಪರಿಣಾಮ ಇಂತಹ ದುರಂತ ಸಂಭವಿಸಿದೆ. ನಗರಸಭೆ ಅಧಿಕಾರಿಗಳು, ಅರಣ್ಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯದಿಂದ ಸಹೋದರ ಮೃತಪಟ್ಟಿದ್ದಾರೆ ಎಂದು ಮೃತನ ದೊಡ್ಡಪ್ಪನ ಮಗ ಮಹೇಶ್ ಮಂಡ್ಯ ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದರ ಆಧಾರದಲ್ಲಿ ಪೊಲೀಸರು ಮೂರು ಇಲಾಖೆಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.