
ಕಲಬುರ್ಗಿ: ವೈದ್ಯರ ನಿರ್ಲಕ್ಷ್ಯದಿಂದ ಯುವಕ ಸಾವನ್ನಪ್ಪಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಗುಲಬರ್ಗಾ ಹಾರ್ಟ್ ಫೌಂಡೇಷನ್ ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಪ್ರತಿಭಟಿಸಿದ್ದಾರೆ.
24 ವರ್ಷದ ಶರಣಬಸಪ್ಪ ಮೃತ ಯುವಕ. ಜೇವರ್ಗಿ ತಾಲೂಕಿನ ಅಂಕಲಗಿ ಗ್ರಾಮದ ಶರಣಬಸಪ್ಪ, ಹೊಟ್ಟೆ ನೋವು, ವಾಂತಿ ಹಿನ್ನೆಲೆಯಲ್ಲಿ ಜುಲೈ 22ರಂದು ಹಾರ್ಟ್ ಫೌಂಡೇಷನ್ ಆಸ್ಪತ್ರೆಗೆ ದಾಖಲಾಗಿದ್ದ. ಎರಡು ದಿನಗಳಿಂದ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಿರಲಿಲ್ಲ ಎನ್ನಲಾಗಿದೆ.
ಇದೇ ಕಾರಣಕ್ಕೆ ಕುಟುಂಬದವರು ಬೇರೆ ಆಸ್ಪತ್ರೆಗೆ ದಾಖಲಿಸುವುದಾಗಿ ಹೇಳಿದ್ದರೂ ವೈದ್ಯರು ಬಿಡಲಿಲ್ಲವಂತೆ. ಇದೀಗ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಕುಟುಂಬದವರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.