ಬೆಂಗಳೂರು: ಹೊಸ ನಾಯಕರನ್ನು ಸೃಷ್ಟಿಸುವ ಉದ್ದೇಶದಿಂದ ಯುವ ಕಾಂಗ್ರೆಸ್ ನಲ್ಲಿ ಆ. 16ರಿಂದ ಸೆ, 16ರವರೆಗೆ ಸದಸ್ಯತ್ವ ನೋಂದಣಿ ಪಕ್ಷದ ಅಂತರಿಕ ಚುನಾವಣೆ ನಡೆಸಲಾಗುವುದು.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜುಲೈ 24 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಆಗಸ್ಟ್ 2ರವರೆಗೆ ನಾಮಪತ್ರ ಸಲ್ಲಿಸಬಹುದು. ಆಗಸ್ಟ್ 3ರಿಂದ 8ರವರೆಗೆ ಪರಿಶೀಲನೆ, ಆಗಸ್ಟ್ 9ರಂದು ನಾಮಪತ್ರ ಅಂತಿಮಗೊಳಿಸಲಿದ್ದು, ಅತಿ ಹೆಚ್ಚು ಮತ ಪಡೆಯುವವರು ಅಧ್ಯಕ್ಷರಾದರೆ ಮತಗಳ ಆಧಾರದ ಮೇಲೆ ನಂತರದ ಸ್ಥಾನ ಪಡೆಯುವವರಿಗೆ ಉಳಿದ ಸ್ಥಾನ ನೀಡಲಾಗುವುದು. ಅಗ್ರ 3 ಸ್ಥಾನ ಪಡೆದವರ ಸಂದರ್ಶನ ನಡೆಸಲಾಗುವುದು ಎಂದು ಹೇಳಿದ್ದಾರೆ.
ಸದಸ್ಯರಾಗ ಬಯಸುವವರು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಆನ್ಲೈನ್ ಸದಸ್ಯತ್ವ ಪಡೆದವರಿಗೆ ಬ್ಲಾಕ್, ಜಿಲ್ಲಾ ಹಾಗೂ ರಾಜ್ಯ ಅಧ್ಯಕ್ಷರ ಆಯ್ಕೆ ಮಾಡಲು ಮತದಾನ ಮಾಡುವ ಅಧಿಕಾರ ಸಿಗಲಿದೆ, ಒಬ್ಬ ಸದಸ್ಯ 6 ಪದಾಧಿಕಾರಿಗಳಿಗೆ ಮತ ಹಾಕುವ ಅಧಿಕಾರ ಇದೆ. ಹೆಚ್ಚಿನ ವಿವರಗಳಿಗೆ ಯುವ ಕಾಂಗ್ರೆಸ್ ಆಪ್ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದ್ದಾರೆ.