10ನೇ ತರಗತಿ ಪರೀಕ್ಷೆಯಲ್ಲಿ ಸತತವಾಗಿ ಫೇಲ್ ಆಗಿಕೊಂಡು ಬಂದಿದ್ದ ಯುವಕನೊಬ್ಬ ತನ್ನ 11ನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದು, ಇದನ್ನು ಈತನ ಕುಟುಂಬ ಮಾತ್ರವಲ್ಲದೆ ಗ್ರಾಮಸ್ಥರೆಲ್ಲರೂ ಸಂಭ್ರಮಿಸಿದ್ದು, ಪಾಸಾದ ಯುವಕನನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮೂಲಕ ಕರೆ ತಂದಿದ್ದಾರೆ.
ಮಹಾರಾಷ್ಟ್ರದ ಕೃಷ್ಣ ನಾಮದೇವ್ ಎಂಬ ಯುವಕನೇ ಇಂತಹ ಭಾರಿ ಸನ್ಮಾನಕ್ಕೆ ಪಾತ್ರನಾದವನಾಗಿದ್ದು, ಈತ ಪರದಿ ತಾಲೂಕಿನ ರತ್ನೇಶ್ವರ ಶಾಲೆಯ ವಿದ್ಯಾರ್ಥಿಯಾಗಿದ್ದು, ನಿರಂತರವಾಗಿ ಫೇಲಾಗಿದ್ದ. ಆದರೂ ಛಲ ಬಿಡದ ಆತ ತನ್ನ ಪ್ರಯತ್ನ ಮುಂದುವರಿಸಿದ್ದು, ಕೊನೆಗೂ ಗುರಿ ಸಾಧಿಸಿದ್ದಾನೆ.
ತನ್ನ ಅಂತಿಮ ಪ್ರಯತ್ನದಲ್ಲಿ ಇತಿಹಾಸ ವಿಷಯದ ಪರೀಕ್ಷೆ ಬರೆದಿದ್ದ ಈತ ಉತ್ತಮ ಅಂಕಗಳೊಂದಿಗೆ ಪಾಸಾಗಿದ್ದು, ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಹಾರ ಹಾಕಿ ಸ್ವಾಗತಿಸಿದ್ದಾರೆ. ಅಲ್ಲದೆ ಕೆಲವರು ಆತನನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದಿದ್ದು ಈ ಸಂದರ್ಭದಲ್ಲಿ ಬ್ಯಾಂಡ್ ಕೂಡ ಬಾರಿಸಲಾಗಿದೆ. ಪಾಸ್ ಆದ ಖುಷಿಯಲ್ಲಿ ಎಲ್ಲರಿಗೂ ಸಿಹಿ ವಿತರಿಸಲಾಗಿದೆ. ಈ ಸಂಭ್ರಮಾಚರಣೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.