ಬೆಂಗಳೂರು: ಹೆಚ್ಚುತ್ತಿರುವ ಇಂಧನ ಬೆಲೆಯಿಂದ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ಬೆಂಗಳೂರಿನ ಉಬರ್ ಕ್ಯಾಬ್ ರೈಡ್‌ಗಳು ಶೇ. 10 ರಷ್ಟು ದುಬಾರಿಯಾಗುವುದು ಖಾತ್ರಿಯಾಗಿದೆ.
ಉಬರ್ ಭಾರತೀಯ ಶಾಖೆಯು ಬುಧವಾರ ಇದನ್ನು ಅಧಿಕೃತವಾಗಿ ಘೋಷಿಸಿದೆ.
ನಾವು ಚಾಲಕರ ಪ್ರತಿಕ್ರಿಯೆಗಳನ್ನು ಆಲಿಸಿದ್ದೇವೆ. ತೈಲ ಬೆಲೆಗಳು ದಿನೇ ದಿನೇ ಹೆಚ್ಚುತ್ತಿರುವುದು ಅವರಲ್ಲಿ ಆತಂಕ ಮೂಡಿಸಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇವೆ. ಈ ನಷ್ಟದಿಂದ ಚಾಲಕರನ್ನು ಪಾರು ಮಾಡಲು ಬೆಂಗಳೂರಿನಲ್ಲಿ ನಾವು ಪ್ರಯಾಣ ದರವನ್ನು ಶೇ.10ರಷ್ಟು ಹೆಚ್ಚಿಸಲು ನಿರ್ಧರಿಸಿದ್ದೇವೆ ಎಂದು ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಕೇಂದ್ರೀಯ ಕಾರ್ಯಾಚರಣೆಗಳ ಮುಖ್ಯಸ್ಥ ನಿತಿಶ್ ಭೂಷಣ್ ಹೇಳಿದ್ದಾರೆ.
ಹೆಚ್ಚುತ್ತಿರುವ ತೈಲ ಬೆಲೆಗಳ ಕಾರಣ ನೀಡಿ ಚಾಲಕರು ಕೆಲವು ದಿನಗಳಿಂದ ಪ್ರಯಾಣದ ಸಂದರ್ಭದಲ್ಲಿ ಎಸಿಗಳನ್ನು ಆನ್ ಮಾಡಲು ನಿರಾಕರಿಸುತ್ತಿದ್ದ ಬಗ್ಗೆ ವರದಿಗಳು ಬಂದಿದ್ದವು.
ಮಾರ್ಚ್ 21ರಂದು ಲೀಟರ್‌ಗೆ ರೂ. 100.58 ಹಾಗೂ ರೂ. 85.01 ಇದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಏ.8ರ ವೇಳೆಗೆ ಕ್ರಮವಾಗಿ 111.09 ರೂ. ಹಾಗೂ 94.79ಕ್ಕೆ ಏರಿಕೆಯಾಗಿವೆ. ಮುಂದಿನ ದಿನಗಳಲ್ಲೂ ತೈಲ ಬೆಲೆ ಏರಿಕೆಯ ಮೇಲೆ ನಾವು ನಿಗಾ ಇರಿಸಿ, ಮುಂದೆ ಅಗತ್ಯಾನುಸಾರ ಕ್ರಮ ಕೈಗೊಳ್ಳುತ್ತೇವೆ ಎಂದೂ ಭೂಷಣ್ ತಿಳಿಸಿದ್ದಾರೆ.