ಹಿಂದೂ ಧರ್ಮವನ್ನ ಪಾಲಿಸುವ ಬಹುತೇಕ ಎಲ್ಲರೂ ಕೂಡ ಜೀವನ ಸಂಗಾತಿಗಳನ್ನ ಆಯ್ಕೆ ಮಾಡುವಾಗ ಜಾತಕಗಳ ಮೊರೆ ಹೋಗೋದುಂಟು. ಇದೇ ರೀತಿ ವಿವಿಧ ಧರ್ಮಗಳಲ್ಲಿ ವಿವಿಧ ರೀತಿಯ ಆಚರಣೆಗಳು ಇರಬಹುದು. ಆದರೆ ಸಂಗಾತಿಗಳ ಆಯ್ಕೆ ವಿಚಾರದಲ್ಲಿ ಜಪಾನಿಗರು ಕೊಂಚ ವಿಭಿನ್ನವಾದ ತಂತ್ರವನ್ನ ಪ್ರಯೋಗಿಸ್ತಾರೆ. ಇವರು ಜನ್ಮ ರಾಶಿ, ನಕ್ಷತ್ರ ಹಾಗೂ ಜನ್ಮ ದಿನಾಂಕಗಳನ್ನ ನೋಡೋದಿಲ್ಲ. ಬದಲಾಗಿ ವ್ಯಕ್ತಿಯ ರಕ್ತದ ಗುಂಪನ್ನ ನೋಡುತ್ತಾರೆ. ಹೌದು..! ನಿಮ್ಮ ರಕ್ತದ ಗುಂಪು ನಿಮ್ಮ ಗುಣ ಎಂಥಾದ್ದು ಅನ್ನೋದನ್ನ ಹೇಳಬಲ್ಲದು.
ಆಂಟಿಜನ್ಗಳ ಆಧಾರದಲ್ಲಿ ರಕ್ತವನ್ನ ಎ, ಬಿ, ಒ ಹಾಗೂ ಎಬಿ ವಿಧಗಳಲ್ಲಿ ವಿಂಗಡಿಸಲಾಗಿದೆ. ಈ ಆಂಟಿಜೆನ್ಗಳು ನಿಮ್ಮ ರೋಗ ನಿರೋಧಕ ಶಕ್ತಿಯು ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ ಅನ್ನೋದನ್ನ ಹೇಳುವ ಸಾಮರ್ಥ್ಯ ಹೊಂದಿದೆ.
ನಿಮಗೆ ಇದು ಆಶ್ಚರ್ಯ ಎನಿಸಬಹುದು. ಆದರೆ ಜಪಾನಿಗರು ಒಬ್ಬ ವ್ಯಕ್ತಿಯನ್ನ ಇಷ್ಟ ಪಡೋಕೂ ಮುನ್ನ ಅವರ ರಕ್ತದ ಗುಂಪನ್ನ ಕೇಳಿ ಬಿಡ್ತಾರಂತೆ. ಹಾಗಾದ್ರೆ ಯಾವ್ಯಾವ ರಕ್ತದ ಗುಂಪು ವ್ಯಕ್ತಿಯ ಗುಣವನ್ನ ಯಾವ ರೀತಿಯಲ್ಲಿ ಪ್ರತಿನಿಧಿಸುತ್ತೆ ಅನ್ನೋದನ್ನ ನೋಡೋಣ :
ಎ ರಕ್ತದ ಗುಂಪು : ಈ ಗುಂಪಿನ ರಕ್ತವನ್ನ ಹೊಂದಿರುವವರು ಸೂಕ್ಷ್ಮ ಸ್ವಭಾವ, ಭಾವನಾ ಜೀವಿ, ಪ್ಯಾಶನೇಟ್ ಹಾಗೂ ಬುದ್ಧಿವಂತರಾಗಿರ್ತಾರೆ. ಅಲ್ಲದೇ ತಾವು ಇಷ್ಟಪಡುವವರ ಜೊತೆ ತುಂಬಾನೇ ಪ್ರಾಮಾಣಿಕವಾಗಿ ಇರುತ್ತಾರೆ.
ಇವರಿಗೆ ಎಲ್ಲರೊಂದಿಗೆ ಗಲಾಟೆ ಮಾಡಿಕೊಳ್ಳೋದು ಅಷ್ಟೊಂದು ಇಷ್ಟವಾಗೋದಿಲ್ಲ. ಆದರೆ ಕೆಲವೊಮ್ಮೆ ಇವರು ತುಂಬಾನೇ ಸೂಕ್ಷ್ಮ ಮನಃಸ್ಥಿತಿಯವರಂತೆ ವರ್ತಿಸಿಬಿಡ್ತಾರೆ. ಇವರು ಯಾವುದೇ ವಿಚಾರದ ಬಗ್ಗೆ ನಿರ್ಧಾರ ಕೈಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ತಾರೆ. ಅಲ್ಲದೇ ಇವರಿಗೆ ಶುದ್ಧ ಹಾಗೂ ಅಚ್ಚುಕಟ್ಟಾಗಿ ಕೆಲಸ ಮಾಡಿ ಅಭ್ಯಾಸ.
ಇವರು ತುಂಬಾನೆ ನಂಬಿಕಸ್ಥ ಜನ ಆಗಿದ್ದರಿಂದ ಹೆಚ್ಚಿನ ಜನರು ಇವರ ಸ್ನೇಹವನ್ನ ಬಯಸುತ್ತಾರೆ. ಇವರು ತಮ್ಮ ಭಾವನೆಯನ್ನ ಅಷ್ಟು ಸುಲಭವಾಗಿ ಹೊರಹಾಕುವ ಪೈಕಿಗೆ ಸೇರಿದವರಲ್ಲ.
ಬಿ ರಕ್ತದ ಗುಂಪು : ಇವರು ತುಂಬಾನೇ ಕ್ರಿಯಾತ್ಮಕ ಚಿಂತಕರು ಹಾಗೂ ತುಂಬಾ ಬೇಗನೆ ನಿರ್ಧಾರಗಳನ್ನ ಕೈಗೊಳ್ತಾರೆ. ಆದರೆ ಇವರು ಆದೇಶಗಳನ್ನ ಸ್ವೀಕರಿಸೋದ್ರಲ್ಲಿ ಉತ್ತಮರಲ್ಲ. ಪ್ರತಿಯೊಂದರಲ್ಲೂ ಉತ್ತಮ ಪ್ರದರ್ಶನ ನೀಡಬೇಕು ಎಂಬ ಹೆಬ್ಬಯಕೆ ಇವರಿಗೆ ಇರುತ್ತೆ. ಆದರೆ ಇವರು ಮಲ್ಟಿ ಟಾಸ್ಕಿಂಗ್ ವಿಚಾರದಲ್ಲಿ ಅಷ್ಟೇನು ನಿಪುಣರಲ್ಲ.
ಅಲ್ಲದೇ ಇವರು ತುಂಬಾನೇ ಚಿಂತನಾಶೀಲರು ಹಾಗೂ ಸಹಾನುಭೂತಿಯನ್ನ ಹೊಂದಿದವರಾಗಿದ್ದಾರೆ. ಇವರು ಸ್ನೇಹಿತರ ವಿಶ್ವಾಸವನ್ನ ಬಹುಬೇಗನೆ ಗಳಿಸುತ್ತಾರೆ. ಸ್ವಾರ್ಥ ಗುಣ ಇರುವ ಕಾರಣಕ್ಕೆ ಇವರನ್ನ ಕೆಲವರು ದೂರ ಇಡುವ ಸಾಧ್ಯತೆಯೂ ಇದೆ.
ಬಿ ರಕ್ತದ ಗುಂಪಿನವರ ಕೆಲ ಗುಣಕ್ಕೆ ಸಮಾಜ ಹೆಚ್ಚು ಆದ್ಯತೆ ನೀಡುತ್ತೆ. ಇವರಿಗೆ ಒಳ್ಳೆಯ ಗುಣ ಇದ್ದರೂ ಸಹ ಹೆಚ್ಚಾಗಿ ನಕಾರಾತ್ಮಕ ಗುಣಗಳೇ ಹೆಚ್ಚು ಫೋಕಸ್ ಆಗಿ ಬಿಡುತ್ತದೆ. ಇದೇ ಕಾರಣಕ್ಕೆ ಈ ಗುಂಪಿನವರು ಏಕಾಂಗಿಯಾಗಿಬಿಡುವ ಸಾಧ್ಯತೆ ಅತಿಯಾಗಿರುತ್ತದೆ.
ಎಬಿ ರಕ್ತದ ಗುಂಪು : ಇವರು ಎ ಹಾಗೂ ಬಿ ರಕ್ತದ ಗುಂಪುಗಳ ಮಿಶ್ರಣದ ಗುಣವನ್ನ ಹೊಂದಿದ್ದಾರೆ. ಇವರ ಇಬ್ಬಗೆಯ ವರ್ತನೆಯಿಂದಾಗಿ ಅರ್ಥ ಮಾಡಿಕೊಳ್ಳೋದೇ ಕಷ್ಟ ಎನಿಸಿಬಿಡುತ್ತೆ. ಇವರು ಎ ಗುಂಪಿನವರಂತೆ ನಾಚಿಕೆ ಸ್ವಭಾವದವರೂ ಹೌದು. ಕೆಲವೊಮ್ಮೆ ಬಿ ರಕ್ತದ ಗುಂಪಿನವರಂತೆ ಕ್ರಿಯಾತ್ಮಕರೂ ಹೌದು. ಹೀಗಾಗಿ ಇವರನ್ನ ಅರ್ಥ ಮಾಡಿಕೊಳ್ಳೋದೇ ಹೆಚ್ಚಿನ ಬಾರಿ ಒಂದು ದೊಡ್ಡ ಸಬಾಲಾಗಿ ಪರಿಣಮಿಸುತ್ತದೆ.
ಇವರು ಬಹುಬೇಗನೆ ಜನರನ್ನ ಸ್ನೇಹಿತರನ್ನಾಗಿ ಮಾಡಿಕೊಳ್ತಾರೆ. ಎಬಿ ರಕ್ತಗುಂಪಿನವರು ಸ್ನೇಹಿತರಾಗಿದ್ದರೆ ಬೇಸರ ಅನ್ನೋದು ಇರೋದೇ ಇಲ್ಲ. ಆದರೆ ಒತ್ತಡವನ್ನ ನಿರ್ವಹಿಸುವಲ್ಲಿ ಮಾತ್ರ ಇವರು ಹಿನ್ನಡೆ ಅನುಭವಿಸ್ತಾರೆ.
ಒ ರಕ್ತದ ಗುಂಪು : ಒ ರಕ್ತದ ಗುಂಪನ್ನ ಹೊಂದಿರುವವರು ಧೈರ್ಯವಂತರು. ಉನ್ನತ ಗುಣಮಟ್ಟದ ಜೀವನವನ್ನ ಇಷ್ಟ ಪಡುವ ಇವರು ಇದಕ್ಕಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾರೆ. ಇವರು ಅತ್ಯುತ್ತಮ ನಾಯಕತ್ವದ ಗುಣ ಹೊಂದಿದ್ದಾರೆ. ಇವರು ಸಣ್ಣಪುಟ್ಟ ವಿಚಾರಕ್ಕೆ ತಲೆಕೆಡಿಸಿಕೊಳ್ಳೋದಿಲ್ಲ. ಇದೇ ಕಾರಣಕ್ಕಾಗಿ ಇವರು ಹೆಚ್ಚಿನ ಬಾರಿ ಜನರ ಕಣ್ಣಲ್ಲಿ ಸ್ವಾರ್ಥಿ ಎನಿಸಿಕೊಳ್ತಾರೆ.
ಇವರು ಉದಾರ ಮನಃಸ್ಥಿತಿಯನ್ನ ಹೊಂದಿರ್ತಾರೆ ಹಾಗೂ ಬದಲಾವಣೆಗಳಿಗೆ ಬಹುಬೇಗನೇ ಹೊಂದಿಕೊಳ್ತಾರೆ. ಕಠಿಣ ಸಂದರ್ಭಗಳಲ್ಲಿ ಇತರೆ ಎಲ್ಲಾ ರಕ್ತದ ಮಾದರಿಯವರಿಗಿಂತ ತುಂಬಾ ಚೆನ್ನಾಗಿ ಪರಿಸ್ಥಿತಿಯಲ್ಲಿ ನಿಭಾಯಿಸಬಲ್ಲರು.
ಒ ರಕ್ತ ಕಣದವರು ಎಬಿ ಹಾಗೂ ಒ ರಕ್ತಕಣಕ್ಕೆ ಬಹುಬೇಗನೇ ಹೊಂದಿಕೊಳ್ತಾರೆ.
ಎ ರಕ್ತ ಕಣದವರು ಎಬಿ ಹಾಗೂ ಎ ರಕ್ತಕಣದ ಜೊತೆ ಹೊಂದಿಕೊಳ್ತಾರೆ.
ಬಿ ರಕ್ತ ಕಣದವರು ಎಬಿ ಹಾಗೂ ಬಿ ಜೊತೆ ಬಹುಬೇಗನೇ ಹೊಂದಿಕೊಳ್ತಾರೆ.
ಎಬಿ ರಕ್ತ ಕಣದವರು ಎಲ್ಲ ರಕ್ತ ಕಣದವರೊಂದಿಗೆ ಸುಲಭವಾಗಿ ಹೊಂದಿಕೊಳ್ತಾರೆ.