ಇಂಟರ್ನೆಟ್ ಬಳಸುವಾಗ ಹ್ಯಾಕರ್ಗಳ ಬಗ್ಗೆ ಯಾವಾಗಲೂ ಅಲರ್ಟ್ ಆಗಿರಬೇಕು. ಪಾಸ್ವರ್ಡ್ ಇಲ್ಲದೆಯೂ ಗೂಗಲ್ ಅಕೌಂಟ್ ಪ್ರವೇಶಿಸುವ ಹೊಸ ವಿಧಾನವನ್ನು ಹ್ಯಾಕರ್ಗಳು ಕಂಡುಹಿಡಿದಿದ್ದಾರೆ. Google ಅಕೌಂಟ್ನ ಪಾಸ್ವರ್ಡ್ ಬದಲಾಯಿಸಿದ್ದರೂ ನಿಮ್ಮ ಖಾತೆ ಹ್ಯಾಕರ್ಗಳ ಪಾಲಾಗಬಹುದು. ಹಳೆಯ ಪಾಸ್ವರ್ಡ್ನೊಂದಿಗೆ ಸೇವ್ ಮಾಡಿದ್ದ ಥರ್ಡ್ ಪಾರ್ಟಿ ಕುಕೀಗಳನ್ನು ಬಳಸಿಕೊಂಡು ಹ್ಯಾಕರ್ಗಳು ಗೂಗಲ್ ಅಕೌಂಟ್ ಪ್ರವೇಶಿಸಬಹುದು.
ಭದ್ರತಾ ಸಂಸ್ಥೆ CloudSEK ಈ ಹೊಸ ನ್ಯೂನ್ಯತೆಯನ್ನು ಕಂಡುಹಿಡಿದಿದೆ. ಈ ನ್ಯೂನ್ಯತೆಯನ್ನು ಬಳಸಿಕೊಂಡು, ಹ್ಯಾಕರ್ಗಳು ಯಾವುದೇ Google ಖಾತೆಯನ್ನು ಸುಲಭವಾಗಿ ಪ್ರವೇಶಿಸಬಹುದು. ಟೆಲಿಗ್ರಾಮ್ ಚಾನೆಲ್ನಲ್ಲಿ ಹ್ಯಾಕರ್ ಒಬ್ಬ ಇದನ್ನು ಹಂಚಿಕೊಂಡಿದ್ದ. ಬ್ರೌಸರ್ನಲ್ಲಿ ವೆಬ್ಸೈಟ್ಗಳು ಉಳಿಸುವ ಸಣ್ಣ ಟೆಕ್ಸ್ಟ್ ಫೈಲ್ಗಳೇ ಥರ್ಡ್ ಪಾರ್ಟಿ ಕುಕೀಗಳಾಗಿವೆ.
ನೀವು ಯಾವುದೇ ವೆಬ್ಸೈಟ್ಗೆ ವಿಸಿಟ್ ಮಾಡಿದಾಗ ನಿಮ್ಮ ಬ್ರೌಸರ್ನಲ್ಲಿ ಥರ್ಡ್ ಪಾರ್ಟಿ ಕುಕೀಗಳನ್ನು ಹೈಜಾಕ್ ಮಾಡಲು ಹ್ಯಾಕರ್ಗಳು ಈ ನ್ಯೂನ್ಯತೆಯನ್ನು ಬಳಸಬಹುದು. ಆ ವೆಬ್ಸೈಟ್ನಲ್ಲಿ Google ಖಾತೆಗೆ ನೀವು ಲಾಗ್ ಇನ್ ಆಗಿದ್ದರೆ, ಹ್ಯಾಕರ್ಗಳು ನಿಮ್ಮ ಖಾತೆಯನ್ನು ಪ್ರವೇಶಿಸಬಹುದು.
ಇನ್ನೊಂದೆಡೆ ಗೂಗಲ್ ತನ್ನ ಕ್ರೋಮ್ ಬ್ರೌಸರ್ನ ಸುರಕ್ಷತೆಯನ್ನು ನವೀಕರಿಸಲು ಮುಂದಾಗಿದೆ. ಮಾಲ್ವೇರ್ನಿಂದ ಬಳಕೆದಾರರನ್ನು ರಕ್ಷಿಸಲು ಈ ಕ್ರಮವನ್ನು ಕೈಗೊಂಡಿದೆ. ಮಾಲ್ವೇರ್ನಿಂದ ಬಳಕೆದಾರರಿಗೆ ಯಾವುದೇ ಹಾನಿಯಾಗದಂತೆ ಕಾಲಕಾಲಕ್ಕೆ ತನ್ನ ಸೇವೆಯನ್ನು ಅಪ್ಗ್ರೇಡ್ ಮಾಡುವುದಾಗಿ ಗೂಗಲ್ ಹೇಳಿದೆ. ಮಾಲ್ವೇರ್ನಿಂದ ರಕ್ಷಿಸಲು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದೆ.
ಹ್ಯಾಕರ್ಗಳಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು ?
ನಿಮ್ಮ ಕಂಪ್ಯೂಟರ್ ಅನ್ನು ಸುರಕ್ಷಿತವಾಗಿರಿಸಲು ಕಾಲಕಾಲಕ್ಕೆ ಅದನ್ನು ಸ್ಕ್ಯಾನ್ ಮಾಡಬೇಕು. ಇದಕ್ಕಾಗಿ ಎಂಟಿವೈರಸ್ ಅಥವಾ ಎಂಟಿ ಮಾಲ್ವೇರ್ ಸಾಫ್ಟ್ವೇರ್ ಬಳಸಬಹುದು. ಸ್ಕ್ಯಾನ್ನಲ್ಲಿ ಯಾವುದೇ ಮಾಲ್ವೇರ್ ಕಂಡುಬಂದರೆ ತಕ್ಷಣ ಅದನ್ನು ತೆಗೆದುಹಾಕಿ. ಇನ್ನು ಗೂಗಲ್ ಖಾತೆಯಲ್ಲಿ ವರ್ಧಿತ ಸುರಕ್ಷಿತ ಬ್ರೌಸಿಂಗ್ ಅವಕಾಶವಿದೆ. ಮೊದಲು Google ಖಾತೆಗೆ ಲಾಗ್ ಇನ್ ಮಾಡಿ. ಸೈಡ್ಬಾರ್ನಲ್ಲಿ “ಸೆಕ್ಯೂರ್” ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಬಳಿಕ ಎನ್ಹಾನ್ಸ್ಡ್ ಸೇಫ್ ಬ್ರೌಸಿಂಗ್ ಎಂಬ ಆಪ್ಷನ್ ಆಯ್ದುಕೊಳ್ಳಿ. ಬಳಿಕ “ಸ್ವಿಚ್ ಆನ್” ಮೇಲೆ ಕ್ಲಿಕ್ ಮಾಡಿದಲ್ಲಿ ನಿಮ್ಮ ಬ್ರೌಸಿಂಗ್ ಸೇಫ್ ಆಗಿರುತ್ತದೆ.