ನಿಮ್ಮ ಜೀವನಶೈಲಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೆಳ್ಳಂಬೆಳಿಗ್ಗೆ ನೀವು ಮಾಡುವ ತಪ್ಪು ಕೆಲಸಗಳು ನಿಮ್ಮ ಆರೋಗ್ಯವನ್ನು ಹಾಳು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.
ಬೆಳಗಿನ ಸಮಯ ಆರೋಗ್ಯಕ್ಕೆ ಬಹಳ ಒಳ್ಳೆಯದು. ವ್ಯಾಯಾಮ, ಉಪಹಾರವನ್ನು ಸರಿಯಾಗಿ ಮಾಡದೆ ಹೋದ್ರೆ ನಿಮ್ಮ ಆರೋಗ್ಯ ಏರುಪೇರಾಗುತ್ತದೆ.
ನೀರು ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರತಿ ದಿನ 8 ಗ್ಲಾಸ್ ನೀರನ್ನು ಅವಶ್ಯವಾಗಿ ಕುಡಿಯಬೇಕು. ಬೆಳಿಗ್ಗೆ ಎದ್ದ ತಕ್ಷಣ ಬೆಚ್ಚಗಿನ ಒಂದು ಲೋಟ ನೀರನ್ನು ಕುಡಿಯಬೇಕು. ಯಾರು ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದಿಲ್ಲವೋ ಅವ್ರ ಆರೋಗ್ಯ ಹಾಳಾಗುವ ಜೊತೆಗೆ ತೂಕ ಏರಿಕೆಯಾಗುತ್ತದೆ.
ಬೆಳಗಿನ ಉಪಹಾರ ಕೂಡ ಬಹಳ ಮುಖ್ಯ. ಸಮಯ ಉಳಿಸಲು ಜನರು ಸಾಮಾನ್ಯವಾಗಿ ಪ್ಯಾಕೆಟ್ ಆಹಾರವನ್ನು ಸೇವಿಸುತ್ತಾರೆ. ಆದ್ರೆ ಅದನ್ನು ಸಂಸ್ಕರಿಸಲು ಹಾಕಿದ ಪದಾರ್ಥ ಹಾಗೂ ರುಚಿ ಹೆಚ್ಚಿಸಲು ಹಾಕುವ ಪದಾರ್ಥ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಜೊತೆಗೆ ತೂಕ ಹೆಚ್ಚಿಸುತ್ತದೆ. ಬೆಳಗಿನ ಉಪಹಾರಕ್ಕೆ ಹಣ್ಣು, ಹಣ್ಣಿನ ರಸ, ಡ್ರೈ ಫ್ರುಟ್ಸ್, ಪೌಷ್ಠಿಕ ಆಹಾರವನ್ನು ಸೇವಿಸಬೇಕು.
ಅನೇಕರು ಬೆಳಗಿನ ಉಪಹಾರ ಸೇವನೆ ಮಾಡುವುದಿಲ್ಲ. ಆದ್ರೆ ಇದು ತಪ್ಪು ಜೀವನ ಕ್ರಮ. ರಾತ್ರಿ ಊಟ ಮಾಡಿ ಮಲಗಿದ ನಂತ್ರ ನಾವು ಏನನ್ನೂ ಸೇವಿಸಿರುವುದಿಲ್ಲ. ಇದ್ರಿಂದ ಹೊಟ್ಟೆ ಖಾಲಿಯಾಗಿ ಶಕ್ತಿ ಇರುವುದಿಲ್ಲ. ಬೆಳಿಗ್ಗೆ ಉಪಹಾರ ಸೇವನೆ ಮಾಡದೆ ಹೋದ್ರೆ ಶಕ್ತಿಯಿಲ್ಲದೆ ಆರೋಗ್ಯ ಹಾಳಾಗುತ್ತದೆ. ದಿನಪೂರ್ತಿ ಉತ್ಸಾಹವಿಲ್ಲದೆ ಕಳೆಯಬೇಕಾಗುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದ್ರಿಂದ ಹೆಚ್ಚು ಕ್ಯಾಲೋರಿ ಬರ್ನ್ ಆಗುತ್ತದೆ. ಮನಸ್ಸು ಶಾಂತವಾಗಿ, ಒತ್ತಡ ಕಡಿಮೆಯಾಗಿ ಹೊಸ ಶಕ್ತಿ, ಉತ್ಸಾಹ ಬರುತ್ತದೆ. ಬೆಳಿಗ್ಗೆ ವಾಕಿಂಗ್, ಸೈಕ್ಲಿಂಗ್, ಓಟ, ಯೋಗ ಇವುಗಳಲ್ಲಿ ಯಾವುದಾದ್ರೂ ಒಂದನ್ನು ಅವಶ್ಯವಾಗಿ ಮಾಡಿ.
ಬೆಳಗಿನ ಸೂರ್ಯನ ಕಿರಣ ನಿಮ್ಮ ದೇಹಕ್ಕೆ ಬಹಳ ಒಳ್ಳೆಯದು. ಬಹುತೇಕರು ಸೂರ್ಯೋದಯಕ್ಕಿಂತ ಮೊದಲು ಏಳುವುದಿಲ್ಲ. ದಿನ ಪೂರ್ತಿ ಎಸಿಯಲ್ಲಿರುವವರ ದೇಹಕ್ಕೆ ಸೂರ್ಯನ ಕಿರಣ ತಾಗುವುದಿಲ್ಲ. ಇದ್ರಿಂದ ಅನಾರೋಗ್ಯ ಕಾಡುತ್ತದೆ.