ಚಿಕ್ಕೋಡಿ: ಭಕ್ತರು ತಮ್ಮ ಬೇಡಿಕೆ ಈಡೇರಿಕೆಗಾಗಿ ವಿಭಿನ್ನವಾದ ಹರಕೆಗಳನ್ನು ಹೊರುತ್ತಾರೆ ನೋಡಿ. ಕೆಲ ದಿನಗಳ ಹಿಂದೆ ಯುವಕನೊಬ್ಬ ಹಿಮ್ಮುಖವಾಗಿ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ದೇವರಿಗೆ ಹರಕೆ ತೀರಿಸಿದ್ದ ವಿಚಾರ ಸುದ್ದಿಯಾಗಿತ್ತು. ಇದೀಗ ವ್ಯಕ್ತಿಯೊಬ್ಬ 50 ಕೆ.ಜಿ ಮೂಟೆ ಹೊತ್ತು ದೀರ್ಘದಂಡ ನಮಸ್ಕಾರ ಮಾಡುತ್ತಾ ದೇವರ ಸನ್ನಿಧಾನಕ್ಕೆ ಆಗಮಿಸುವ ಮೂಲಕ ಹರಕೆ ತೀರಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೋಗೇರಿಯ ಹಾಡಕರ್ ತೋಟದ ಕರೆಪ್ಪ ಕೃಷ್ಣಪ್ಪಾ ಸುಣದೋಳಿ ಎಂಬ ಯುವಕ ಬೆನ್ನ ಮೇಲೆ 50 ಕೆಜಿ ಮೂಟೆ ಹೊತ್ತು ಹಾರೋಗೇರಿ ಪಟ್ಟಣದ ಕರಿಸಿದ್ದೇಶ್ವರ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಮಾಡುವ ಮೂಲಕ ತನ್ನ ಹರಕೆ ತೀರಿಸಿದ್ದಾನೆ.
ಈ ಬಗ್ಗೆ ಮಾತನಾಡಿರುವ ಯುವಕ, ದೇವರಿಗೆ ವಿಶೇಷ ರೀತಿಯಲ್ಲಿ ನನ್ನ ಭಕ್ತಿ ಸಮರ್ಪಣೆ ಮಾಡಬೇಕು ಎಂಬುದು ಚಿಕ್ಕವಯಸ್ಸಿನಿಂದಲೂ ನನ್ನ ಆಸೆಯಾಗಿತ್ತು. ಹಾಗಾಗಿ 50 ಕೆ.ಜಿ ಮೂಟೆ ಬೆನ್ನ ಮೇಲೆ ಹೊತ್ತು ದೀರ್ಘದಂಡ ನಮಸ್ಕಾರ ಮಾಡುತ್ತಾ ದೇವಾಲಯಕ್ಕೆ ಬಂದಿದ್ದೇನೆ. ಇದರಲ್ಲಿ ವಿಶೇಷವೇನೂ ಇಲ್ಲ ಎಂದು ಹೇಳಿದ್ದಾನೆ.
ಅಲ್ಲದೇ ನಾನು ಇನ್ನೂ ಬೇರೆ ಬೇರೆ ರೀತಿಯಲ್ಲಿ ದೇವರಿಗೆ ನನ್ನ ಭಕ್ತಿ ಸಮರ್ಪಣೆ ಮಾಡಬೇಕೆಂಬ ಆಸೆಯಿರುವುದಾಗಿ ತಿಳಿಸಿದ್ದಾನೆ. ದೇವರು ಇದೇ ರೀತಿ ಆರೋಗ್ಯ ಭಾಗ್ಯ ಕರುಣಿಸಿದರೆ ನನ್ನ ಭಕ್ತಿಯ ಸೇವೆ ಮುಂದುವರೆಸಿಕೊಂಡು ಹೋಗುವುದಾಗಿ ಹೇಳಿದ್ದಾನೆ.