ಪ್ರೇಯಸಿಯ ಕತ್ತು ಸೀಳಿ ಕೊನೆಗೆ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಿಯಕರ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾನೆ.
ನಿನ್ನೆ ಸಂಜೆ ಸುಮಾರಿಗೆ ಉಡುಪಿ ನಗರದ ಸಂತೆಕಟ್ಟೆ ಎಂಬಲ್ಲಿ ಸಂದೇಶ್ ಕುಲಾಲ್ (29) ಎಂಬಾತ ಸೌಮ್ಯಶ್ರೀ ಭಂಡಾರಿ(28) ಎಂಬಾಕೆಯ ಕತ್ತು ಸೀಳಿದ್ದ. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆಯೇ ಸೌಮ್ಯಶ್ರೀ ಸಾವನ್ನಪ್ಪಿದ್ದರೆ ಇಂದು ಬೆಳಗ್ಗೆ ಸಂದೇಶ್ ಕೂಡ ಮೃತಪಟ್ಟಿದ್ದಾನೆ.
ಉಡುಪಿ ಅಂಬಾಗಿಲು ನಿವಾಸಿಯಾಗಿದ್ದ ಸೌಮ್ಯಶ್ರೀ ಹಾಗೂ ಅಲೆವೂರು ನಿವಾಸಿ ಸಂದೇಶ್ ಪರಸ್ಪರ 7 ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಇವರಿಬ್ಬರ ಪ್ರೀತಿಗೆ ಸೌಮ್ಯಶ್ರೀ ಕುಟುಂಬಸ್ಥರು ವಿರೋಧವೊಡ್ಡಿದ್ದರು. ಹೀಗಾಗಿ ಮೂರು ದಿನಗಳ ಹಿಂದೆಯಷ್ಟೇ ಬೇರೊಬ್ಬ ಯುವಕನ ಜೊತೆ ಸೌಮ್ಯಶ್ರೀ ಮದುವೆ ನಿಶ್ಚಯವಾಗಿತ್ತು. ಇದೇ ವಿಚಾರವಾಗಿ ನಿನ್ನೆ ಸಂತೆಕಟ್ಟೆ ಎಂಬಲ್ಲಿ ಸಂದೇಶ ಸೌಮ್ಯಶ್ರೀ ಜೊತೆ ವಾಗ್ವಾದಕ್ಕೆ ಇಳಿದಿದ್ದ ಎನ್ನಲಾಗಿದೆ.
ಮಾತು ತಾರಕಕ್ಕೇರುತ್ತಿದ್ದಂತೆಯೇ ಚಾಕು ತೆಗೆದ ಸಂದೇಶ ಪ್ರೇಯಸಿಯ ಕತ್ತು ಸೀಳಿದ್ದಾನೆ. ಆಕೆ ಕುಸಿದು ಬೀಳುತ್ತಿದ್ದಂತೆಯೇ ತಾನು ಕೂಡ ಕತ್ತು ಸೀಳಿಕೊಂಡಿದ್ದಾನೆ. ನಿನ್ನೆ ಸಂಜೆಯೇ ಸೌಮ್ಯಶ್ರೀ ಸಾವನ್ನಪ್ಪಿದ್ದರೆ ಇಂದು ಬೆಳಗ್ಗೆ ಸಂದೇಶ್ ಮೃತಪಟ್ಟಿದ್ದಾನೆ. ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮಣಿಪಾಲದ ಕೆಎಂಸಿ ಶವಾಗಾರದಲ್ಲಿ ಇಡಲಾಗಿದೆ.