ಬೆಂಗಳೂರು: ಪ್ರೀತಿಯಲ್ಲಿ ಬಿರುಕು ಮೂಡಿರಿದ್ದರಿಂದ ತಾನು ಕೊಡಿಸಿದ್ದ ಮೊಬೈಲ್ ಹಾಗೂ ದ್ವಿಚಕ್ರ ವಾಹನ ವಾಪಸ್ ಕೇಳಲು ಯುವತಿಯ ಮನೆ ಬಳಿ ತೆರಳಿದ್ದ ಮಾಜಿ ಪ್ರಿಯಕರನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ ಹಾಲಿ ಪ್ರಿಯಕರನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನೇಪಾಳ ಮೂಲದ ಬಿಕಾಸ್(26) ಬಂಧಿತ ಆರೋಪಿ. ಜನವರಿ 13ರಂದು ಸಂಜೆ ಜಕ್ಕೂರು ಲೇಔಟ್ ನ 10ನೇ ಬಿ ಕ್ರಾಸ್ ನಲ್ಲಿ ನೇಪಾಳ ಮೂಲದ ಲೋಕೇಶ್ ಗುರುಂಗ್(25) ಮೇಲೆ ಬಿಕಾಸ್ ಹಾಗೂ ಆತನ ಸಹಚರರು ಹಲ್ಲೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬೆಂಗಳೂರಿನಲ್ಲಿ ಸೇಲ್ಸ್ ಕೆಲಸ ಮಾಡಿಸಿಕೊಂಡಿದ್ದ ಲೋಕೇಶ್ ನೇಪಾಳ ಮೂಲದ ಸಂಧ್ಯಾ ಹಾಗೂ ಆಕೆಯ ಕುಟುಂಬದವರನ್ನು ಬೆಂಗಳೂರಿಗೆ ಕರೆತಂದು ಬಾಡಿಗೆ ಮನೆ ಮಾಡಿ ಇರಿಸಿದ್ದ. ಲೋಕೇಶ್ ಮತ್ತು ಸಂಧ್ಯಾ ಪರಸ್ಪರ ಪ್ರೀತಿಸುತ್ತಿದ್ದರು. ಲೋಕೇಶ್ ಸಂಧ್ಯಾಗೆ ಮೊಬೈಲ್, ದ್ವಿಚಕ್ರವಾಹನ ಕೊಡಿಸಿದ್ದ. ಎಂಟು ತಿಂಗಳ ಕಾಲ ಒಂದೇ ಮನೆಯಲ್ಲಿ ಇಬ್ಬರು ಸಹಜೀವನ ನಡೆಸಿದ್ದರು.
ಡಿಸೆಂಬರ್ 1ರಂದು ಅವರ ನಡುವೆ ಭಿನ್ನಾಭಿಪ್ರಾಯ ಬಂದಿದ್ದು, ಆಗ ಸಂಧ್ಯಾ ಬಿಕಾಸ್ ಜೊತೆಗೆ ಓಡಿ ಹೋಗಿದ್ದಾಳೆ. ಜನವರಿ 13ರಂದು ಸಂಧ್ಯಾ ತಂಗಿ ಸೃಷ್ಟಿಗೆ ಕರೆ ಮಾಡಿದ ಲೋಕೇಶ್ ಮೊಬೈಲ್ ಮತ್ತು ದ್ವಿಚಕ್ರ ವಾಹನ ವಾಪಸ್ ಕೊಡಿಸುವಂತೆ ಕೇಳಿದ್ದಾನೆ. ಈ ವೇಳೆ ಆಕೆ ಮನೆಗೆ ಬನ್ನಿ ಎಂದು ಕರೆದಿದ್ದಾಳೆ. ಲೋಕೇಶ್ ಮತ್ತು ಆತನ ಸ್ನೇಹಿತ ಪ್ರೇಮ್ ಜಕ್ಕೂರಿನ ಸಂಧ್ಯಾ ಮನೆಗೆ ಹೋದಾಗ ಸ್ವಲ್ಪ ಸಮಯ ಕುಳಿತುಕೊಳ್ಳಿ ಎಂದು ಸೃಷ್ಟಿ ತಿಳಿಸಿದ್ದಾಳೆ. ಈ ವೇಳೆ ಬಿಕಾಸ್ ಮತ್ತು ಆತನ ಸಹಚರರು ಮನೆ ಬಳಿ ಬಂದು ಲೊಕೇಶನ ಮೇಲೆ ಹಲ್ಲೆ ನಡೆಸಿದ್ದಾರೆ. ಚಾಕು ಮತ್ತು ಸ್ಕ್ರೂಡ್ರೈವರ್ ನಿಂದ ಎದೆ, ಕುತ್ತಿಗೆಗೆ ಇರಿದಿದ್ದಾರೆ. ಜಗಳ ಬಿಡಿಸಲು ಹೋದ ಪ್ರೇಮ್ ಮೇಲೆಯೂ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.