ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ.
23 ವರ್ಷದ ಯೋಗೇಶ್ ಕೊಲೆಯಾದ ಯುವಕ. ಶಿವರಾತ್ರಿ ಹಿನ್ನೆಲೆಯಲ್ಲಿ ಗಿರಿನಗರದ ದೇವಸ್ಥಾನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಡಾನ್ಸ್ ಮಾಡುವಾಗ ಯುವಕನ ಮೈ ಟಚ್ ಆಯಿತು ಎಂಬ ಕಾರಣಕ್ಕೆ ಗಲಾಟೆ ನಡೆದಿದೆ.
ಬಳಿಕ ಡಾನ್ಸ್ ಕಾರ್ಯಕ್ರಮ ಮುಗಿಸಿ ಯುವಕ ಶ್ರೀನಗರದಲ್ಲಿರುವ ತನ್ನ ಮನೆಗೆ ಬೈಕ್ ನಲ್ಲಿ ತೆರಳುತ್ತಿದ್ದ. ಈ ವೇಳೆ ಯುವಕನನ್ನು ನಾಲ್ವರು ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದು, ಚಾಕುವಿನಿಂದ ಇರಿದು ಕೊಂದಿದ್ದಾರೆ ಎಂದು ತಿಳಿದುಬಂದಿದೆ.
ದಾಳಿಯಿಂದ ತಪ್ಪಿಸಿಕೊಳ್ಳಲು ಯುವಕ ಮನೆಯೊಂದರ ಕಾಂಪೌಂಡ್ ಹಾರಿದ್ದ. ಈ ವೇಳೆ ಕಾಂಪೌಂಡ್ ಗೆ ಹಾಕಿದ್ದ ಗಾಜುಗಳು ಚುಚ್ಚಿ ಸಾವನ್ನಪ್ಪಿರಬಹುದು ಎಂದು ಸ್ಥಳೀಯರು ಭಾವಿಸಿದ್ದರು. ಆದರೆ ತನಿಖೆ ವೇಳೆ ಚಾಕುವಿನಿಂದ ಇರಿದು ಯುವಕನನ್ನು ಕೊಲೆ ಮಾಡಲಾಗಿದೆ ಎಂಬುದು ತಿಳಿದುಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಟರಾಯನಪುರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.