ಬೆಂಗಳೂರು: ಪತಿ ದುಬೈನಲ್ಲಿ ಇರುವುದಾಗಿ ಹೇಳಿ ಯುವಕನಿಗೆ ಗಾಳ ಹಾಕಿ ಹನಿ ಟ್ರ್ಯಾಪ್ ಮಾಡಲಾಗಿದ್ದು, 21,000 ರೂ. ಸುಲಿಗೆ ಮಾಡಲಾಗಿದೆ. ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈಟ್ ಫೀಲ್ಡ್ ಇಮ್ಮಡಿಹಳ್ಳಿಯ 27 ವರ್ಷದ ಯುವಕ ಪೊಲೀಸರಿಗೆ ದೂರು ನೀಡಿದ್ದು, ಮೆಹರ್ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕೆಲಸದ ನಿಮಿತ್ತ ಗಂಡ ದುಬೈನಲ್ಲಿದ್ದಾರೆ. ಏಕಾಂತ ಬಯಸಿ ಸಂಗಾತಿ ಹುಡುಕುತ್ತಿರುವುದಾಗಿ ಹೇಳಿದ ಮಹಿಳೆ ಯುವಕನನ್ನು ನಂಬಿಸಿ ಮನೆಗೆ ಕರೆಸಿಕೊಂಡಿದ್ದಾಳೆ. ನಂತರ ಸಹಚರರೊಂದಿಗೆ ಸೇರಿ ಯುವಕನನ್ನು ಸುಲಿಗೆ ಮಾಡಿದ್ದಾಳೆ.
ಟೆಲಿಗ್ರಾಂನಲ್ಲಿ ಪರಿಚಯವಾದ ಮೆಹರ್ ತನ್ನ ಗಂಡ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಪರಪುರುಷನನೊಂದಿಗೆ ಏಕಾಂತದಲ್ಲಿ ಇರಲು ಬಯಸಿದ್ದೇನೆ ಎಂದು ಹೇಳಿ ಅರೆ ಬೆತ್ತಲೆ ಫೋಟೋ ಮತ್ತು ಲೊಕೇಷನ್ ಕಳುಹಿಸಿ ಮನೆಗೆ ಆಹ್ವಾನಿಸಿದ್ದಾಳೆ. ಮಾರ್ಚ್ 3ರಂದು ಮಧ್ಯಾಹ್ನ 3:30ಕ್ಕೆ ಮಹಿಳೆ ಹೇಳಿದ್ದ ಸ್ಥಳಕ್ಕೆ ಯುವಕ ಹೋಗಿದ್ದಾನೆ. ಜೆಪಿ ನಗರ ನಿವಾಸಕ್ಕೆ ಆತ ತೆರಳಿ ಮಹಿಳೆಯ ಮನೆಯ ಬೆಡ್ರೂಮ್ ನಲ್ಲಿ ಕುಳಿತಿದ್ದಾನೆ. ಈ ವೇಳೆ ಏಕಾಏಕಿ ಮೂವರು ಅಪರಿಚಿತರು ಒಳಗೆ ನುಗ್ಗಿ ಮೊಬೈಲ್ ನಲ್ಲಿ ಬೆತ್ತಲೆ ಫೋಟೋ ತೆಗೆದು ತಂದೆ, ತಾಯಿಗೆ ಕಳುಹಿಸುವುದಾಗಿ ಬೆದರಿಸಿದ್ದಾರೆ. ಮಸೀದಿಗೆ ಕರೆದುಕೊಂಡು ಹೋಗಿ ಮುಂಜಿ ಮಾಡಿ ಮಹಿಳೆಯೊಂದಿಗೆ ಮದುವೆ ಮಾಡಿಸುತ್ತೇವೆ. ಇದೆಲ್ಲ ಬೇಡವೆಂದರೆ ಮೂರು ಲಕ್ಷ ಕೊಡು ಎಂದು ಬೆದರಿಸಿದ್ದಾರೆ. ನಂತರ ಯುವಕನ ಮೊಬೈಲ್ ಕಸಿದುಕೊಂಡು ಫೋನ್ ಪೇ ನಲ್ಲಿ 21,000 ರೂಗಳನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದು, ಯುವಕ ಅವರಿಂದ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.