ಮಂಗಳೂರು: ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಆತನ ತಾಯಿ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೆಟ್ಟಂಪಾಡಿಯ ಪಾರೆ ಗ್ರಾಮದಲ್ಲಿ ನಡೆದಿದೆ.
33 ವರ್ಷದ ಚೇತನ್ ಮೃತ ಯುವಕ. ಚೆತನ್ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾನೆ ಎಂದು ಆತನ ತಾಯಿ ಉಮಾವತಿ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ಕಂಡು ಅನುಮಾನಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತಾಯಿ ಹಾಗೂ ನೆರೆಮನೆಯ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ತಡರಾತ್ರಿ ಕುಡಿದು ಮನೆಗೆ ಬಂದಿದ್ದ ಚೇತನ್, ತಾಯಿ ಜೊತೆ ಜಗಳವಾಡಿದ್ದ. ಬಳಿಕ ನೆರೆಮನೆಯ ಯೂಸುಫ್ ಎಂಬುವವರ ಮನೆ ಬಾಗಿಲು ಬಡಿದಿದ್ದ. ಇದಕ್ಕೆ ಯೂಸುಫ್ ಚೇತನ್ ತಾಯಿಗೆ ಕರೆ ಮಾಡಿ ಹೇಳಿದ್ದರು. ಈ ವೇಳೆ ಚೇತನ್ ತಾಯಿ ಉಮಾವತಿ ನಾಯಿಯನ್ನು ಕಟ್ಟುವ ಸಂಕೋಲೆಯನ್ನು ತಂದು ಚೇತನ್ ಸೊಂಟಕ್ಕೆ ಹಾಕಿ ಯೂಸುಫ್ ಸೇರಿದಂತೆ ಸ್ಥಳೀಯರು ಮನೆಗೆ ಎಳೆದು ತಂದಿದ್ದರು. ಚೇತನ್ ನನ್ನು ಎಳೆಯುವ ವೇಳೆ ಆತನ ಕುತ್ತಿಗೆಗೆ ಸಂಕೋಲೆ ಸುತ್ತಿಕೊಂಡು, ಕುತ್ತಿಗೆ ಬಿಗಿದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಚೇತನ್ ತಾಯಿ ಹಾಗೂ ಇನ್ನಿಬ್ಬರನ್ನು ಪುತ್ತುರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದು, ಮೃತದೇಹವನ್ನು ಮಂಗಳೂರು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.