ಬೆಂಗಳೂರು: ಹರ್ನಿಯಾ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದವನು ವೈದ್ಯರ ಎಡವಟ್ಟಿನಿಂದ 6 ವರ್ಷಗಳಿಂದ ಕೋಮಾದಲ್ಲಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ವಿಘ್ನೇಶ್ ಮೃತ ಯುವಕ. 2017ರಲ್ಲಿ ಏಪ್ರಿಲ್ 4ರಂದು ಬೆಂಗಳೂರಿನ ಸುಬ್ರಹ್ಮಣ್ಯನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಶಸ್ತ್ರ ಚಿಕಿತ್ಸೆಗಾಗಿ ವಿಘ್ನೇಶ್ ಗೆ ವೈದ್ಯರು ಮೂರು ಬಾರಿ ಅನಸ್ತೇಷಿಯ ನೀಡಿದ್ದರು. ಇದರಿಂದ ಪ್ರಜ್ಞೆ ಕಳೆದುಕೊಂಡ ವಿಘ್ನೇಶ್ ಕೋಮಾಸ್ಥಿತಿ ತಲುಪಿದ್ದ.
ಆಸ್ಪತ್ರೆ ವೈದ್ಯರ ಎಡವಟ್ಟಿಗೆ ಪೋಷಕರು ಬನಶಂಕರಿ ಠಾಣೆಯಲ್ಲಿ ದೂರು ನೀಡಿದ್ದರು. 6 ವರ್ಷಗಳಿಂದ ಕೋಮಾದಲ್ಲಿದ್ದ ಯುವಕನಿಗೆ ಚಿಕಿತ್ಸಾ ವೆಚ್ಚವಾಗಿ ಆಸ್ಪತ್ರೆಯವರು 5 ಲಕ್ಷ ಹಣ ನೀಡಿ ಕೈತೊಳೆದುಕೊಂಡಿದ್ದರು.
ಚಿಕಿತ್ಸೆಗಾಗಿ ಈಗಾಗಲೇ ಪೋಷಕರು 19 ಲಕ್ಷ ಕರ್ಚು ಮಾಡಿದ್ದಾರೆ. ಕೋಮಾಸ್ಥಿತಿಯಲ್ಲಿದ್ದ ಯುವಕ ಇದೀಗ ಕೊನೆಯುಸಿರೆಳೆದಿದ್ದಾನೆ. ಕುಟುಂಬಕ್ಕೆ ಆಸರೆಯಾಗಬೇಕಿದ್ದ 20 ವರ್ಷದ ಯುವಕ ಕೋಮಾಸ್ಥಿತಿ ತಲುಪಿದವನು ಮರಳಿ ಬಾರಲೇ ಇಲ್ಲ. ಮಗನನ್ನು ಕಳೆದುಕೊಂಡಿರುವ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಇನ್ನೊಂದೆಡೆ ಪೋಷಕರು ಬನಶಂಕರಿ ಠಾಣೆಯಲ್ಲಿ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.