
ಮುಂಡಗೋಡ: ಹೋರಿ ಬೆದರಿಸುವ ಸ್ಪರ್ಧೆ ವೇಳೆಯಲ್ಲಿ ಹೋರಿ ತಿವಿದು ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಮುಂಡಗೋಡ ತಾಲೂಕು ಕೋಡಂಬಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಚಂದ್ರು ಆಡೂರ(27) ಮೃತಪಟ್ಟ ಯುವಕ. ಮಂಗಳವಾರ ಕೋಡಂಬಿ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಹಾವೇರಿ, ಶಿವಮೊಗ್ಗ, ರಾಣೆಬೆನ್ನೂರು, ಧಾರವಾಡ, ಹಾನಗಲ್ ಮೊದಲಾದ ಕಡೆಗಳಿಂದ 500ಕ್ಕೂ ಹೆಚ್ಚು ಹೋರಿಗಳು ಸ್ಪರ್ಧೆಗೆ ಬಂದಿದ್ದವು. ಸಾವಿರಾರು ಜನ ಸ್ಪರ್ಧೆ ವೀಕ್ಷಿಸಲು ಆಗಮಿಸಿದ್ದರು. ಸ್ಪರ್ಧೆಯಲ್ಲಿದ್ದ ಹೋರಿಯೊಂದು ಚಂದ್ರು ಎದೆ ಭಾಗಕ್ಕೆ ಬಲವಾಗಿ ತಿವಿದಿದ್ದು, ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ.