ಕ್ಷುಲ್ಲಕ ಕಾರಣಕ್ಕೆ ಯುವತಿಯೊಬ್ಬಳು ವೃದ್ದ ದಂಪತಿಗಳ ಕೆನ್ನೆಗೆ ಹೊಡೆದಿರುವ ಆಘಾತಕಾರಿ ಘಟನೆ ನೋಯ್ಡಾದಲ್ಲಿ ನಡೆದಿದೆ. ನೋಯ್ಡಾದ ಪ್ರತಿಷ್ಟಿತ ಸೊಸೈಟಿಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಯುವತಿಯರು ಮತ್ತು ವೃದ್ಧ ದಂಪತಿಗಳ ನಡುವೆ ಹಿಂಸಾತ್ಮಕ ವಾಗ್ವಾದ ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
ಸೊಸೈಟಿ ಆವರಣದಲ್ಲಿ ನಾಯಿಯನ್ನು ಓಡಿಸದಂತೆ ದಂಪತಿ ಮನವಿ ಮಾಡಿದ್ದು, ಇದರಿಂದ ವಿವಾದ ಪ್ರಾರಂಭವಾಯಿತು, ಬಳಿಕ ಇದು ದೈಹಿಕ ಘರ್ಷಣೆಗೆ ಕಾರಣವಾಗಿದ್ದು, ವೀಡಿಯೊದಲ್ಲಿ, ಇಬ್ಬರು ಯುವತಿಯರು ವೃದ್ಧ ದಂಪತಿಗಳ ಮೇಲೆ ಕೈ ಮಾಡುವುದನ್ನು ಕಾಣಬಹುದು, ಮಧ್ಯಪ್ರವೇಶಿಸಿದ ಸೊಸೈಟಿ ನಿವಾಸಿಗಳು ಜಗಳ ಬಿಡಿಸಿದ್ದಾರೆ.
ನೆಟಿಜನ್ಗಳ ಆಕ್ರೋಶ ಮತ್ತು ಖಂಡನೆ
ವೈರಲ್ ವೀಡಿಯೊ ಆನ್ಲೈನ್ನಲ್ಲಿ ಕಾಣಿಸಿಕೊಂಡ ನಂತರ ಆಕ್ರೋಶ ವ್ಯಕ್ತವಾಗುತ್ತಿದ್ದು, ವಯಸ್ಸಾದ ದಂಪತಿಗಳ ಮೇಲೆ ಹುಡುಗಿಯರ ಆಕ್ರಮಣಕಾರಿ ವರ್ತನೆಗೆ ಆಘಾತ ಮತ್ತು ಕೋಪವನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಬಳಕೆದಾರರು ಯುವತಿಯರು ತೋರಿದ ವರ್ತನೆಯನ್ನು ಖಂಡಿಸಿ ಕಠಿಣ ಕ್ರಮಕ್ಕೆ ಮನವಿ ಮಾಡಿದ್ದಾರೆ. ಕೆಲವು ಟ್ವೀಟ್ಗಳು ಹಿರಿಯ ನಾಗರಿಕರಿಗೆ, ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಸಂವೇದನಾಶೀಲತೆ ಮತ್ತು ಗೌರವದ ಅಗತ್ಯವನ್ನು ಎತ್ತಿ ತೋರಿಸಿದ್ದಾರೆ.
ಒಬ್ಬ ಬಳಕೆದಾರರು “ಇದು ಭಯಾನಕವಾಗಿದೆ. ಹಿರಿಯರ ಬಗ್ಗೆ ಇಂತಹ ವರ್ತನೆ ಸ್ವೀಕಾರಾರ್ಹವಲ್ಲ. ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು! ” ಎಂದರೆ, ಮತ್ತೊಬ್ಬ ಬಳಕೆದಾರ “ಹಿರಿಯರ ನಿಂದನೆಯನ್ನು ಎಂದಿಗೂ ಸಹಿಸಬಾರದು, ಈ ವಿಚಾರದಲ್ಲಿ ಅವರಿಗೆ ನ್ಯಾಯ ಸಿಗುತ್ತದೆ ಎಂದು ಭಾವಿಸುತ್ತೇವೆ. ” ಎಂದು ಹೇಳಿದ್ದಾರೆ. ನೆಟಿಜನ್ಗಳು ಸ್ಥಳೀಯ ಅಧಿಕಾರಿಗಳನ್ನು ಟ್ಯಾಗ್ ಮಾಡಿದ್ದು, ಘಟನೆಯ ಬಗ್ಗೆ ಗಮನಹರಿಸಿ ಸಂತ್ರಸ್ತ ದಂಪತಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸುತ್ತಿದ್ದಾರೆ.