
ಸ್ನೇಹಿತನೇ ಯುವತಿಯನ್ನು ಹತ್ಯೆಗೈದು ಬಳಿಕ ಮೃತದೇಹಕ್ಕೆ ಕಲ್ಲು ಕಟ್ಟಿ ಚಾವ್ಲಾ ಕಾಲುವೆಗೆ ಎಸೆದಿರುವ ಘೋರ ಘಟನೆ ನವದೆಹಲಿಯಲ್ಲಿ ನಡೆದಿದೆ.
ಕೋಮಲ್ ಕೊಲೆಯಾದ ಯುವತಿ. ಸೀಮಾಪುರಿ ಸುಂದರ್ ನಗರದ ನಿವಾಸಿ. ಕೋಮಲ್ ಳ ಆಪ್ತ ಸ್ನೇಹಿತ ಆಸೀಫ್ ಕೊಲೆ ಆರೋಪಿ.
ಟ್ಯಾಕ್ಸಿ ಚಾಲಕನಾಗಿದ್ದ ಆಸೀಫ್ ಹಾಗೂ ಕೋಮಲ್ ಹಲವು ವರ್ಷಗಳ ಪರಿಚಯದವರು. ಮಾರ್ಚ್.12ರಂದು ಸೀಮಾಪುರಿಯಿಂದ ಕೋಮಲ್ ಳನ್ನು ಕಾರಿನಲ್ಲಿ ಕರೆದೊಯ್ದಿದ್ದ. ದಾರಿಯುದ್ದಕ್ಕೂ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಕೋಪಗೊಂಡ ಆಸೀಫ್, ಕೋಮಲ್ ಳನ್ನು ಕತ್ತು ಹಿಸುಕಿ ಕೊಂದೇ ಬಿಟ್ಟಿದ್ದಾನೆ.
ಬಳಿಕ ಆಕೆಯ ಶವವನ್ನು ಕಾಲುವೆಗೆ ಬಿಸಾಕಿದ್ದಾನೆ. ಕಾಲುವೆಯಿಂದ ಶವ ಮೇಲೆ ತೇಲಬಾರದು ಎಂಬ ಕಾರಣಕ್ಕೆ ಶವಕ್ಕೆ ಕಲ್ಲುಕಟ್ಟಿ ಚಾವ್ಲಾ ಕಾಲುವೆಗೆ ಎಸೆದಿದ್ದಾನೆ. ಯುವತಿಯ ಶವ ಕೊಳೆತು ಹೋಗಿದ್ದರಿಂದ ಐದಾರು ದಿನಗಳ ಬಳಿಕ ಶವ ಕಾಲುವೆಯಲ್ಲಿ ತೇಲುತ್ತಿತ್ತು. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಚಾವ್ಲಾ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ವೇಳೆ ಸೀಮಾಪುರಿ ಠಾಣೆಯಲ್ಲಿ ಯುವತಿಯ ಮನೆಯವರು ನಾಪತ್ತೆ ಪ್ರಕರಣ ದಾಖಲಿಸಿರುವುದು ಬೆಳಕಿಗೆ ಬಂದಿದೆ. ಸಿಸಿಕ್ಯಾಮರಾ ಪರಿಶೀಲಿಸಿ ಕಾರನ್ನು ವಶಕ್ಕೆ ಪಡೆದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.