ತುಮಕೂರು: ಕೆರೆಕೋಡಿ ನೋಡಲೆಂದು ಹೋಗಿದ್ದ ಯುವತಿ ಫೋಟೋ ತೆಗೆಯುವಾಗ ಕಾಲು ಜಾರಿ ಬಿದ್ದು, ಸಾವನ್ನೇ ಗೆದ್ದು ಬಂದ ಘಟನೆ ತುಮಕೂರು ತಾಲೂಕಿನ ಮೈದಾಳ ಕೆರೆಯಲ್ಲಿ ನಡೆದಿದೆ.
19 ವರ್ಷದ ಹಂಸ ಪವಾಡ ಸದೃಶ ರೀತಿಯಲ್ಲಿ ಬದುಕಿ ಬಂದಿದ್ದಾಳೆ. ಗುಬ್ಬಿ ಮೂಲದ ಶಿವರಾಂಪುರ ಗ್ರಾಮದ ಸೋಮನಾಥ್ ಅವರ ಪುತ್ರಿ ಹಂಸ ಸ್ನೇಹಿತರೊಂದಿಗೆ ಮಂದಾರಗಿರಿ ಬೆಟ್ಟಕ್ಕೆ ಬಂದಿದ್ದಳು. ಅಲ್ಲಿಯೇ ಸಮೀಪವಿರುವ ಮೈದಾಳ ಕೆರೆಕೋಡಿ ನೋಡಲು ಹೋಗಿದ್ದಾರೆ. ಅಲ್ಲಿ ಫೋಟೋ ತೆಗೆಸಿಕೊಳ್ಳಲು ಸ್ನೇಹಿತೆಯೊಂದಿಗೆ ಕೆರೆಕೋಡಿ ಜಲಪಾತದಂತೆ ಹರಿಯುವ ನೀರಲ್ಲಿ ಕಲ್ಲಿನ ಮೇಲೆ ನಿಂತಿದ್ದಾರೆ. ಈ ವೇಳೆ ಹಂಸಾ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ನೀರಲ್ಲಿ ಕೊಚ್ಚಿ ಹೋಗಿದ್ದ ಯುವತಿ ಕಲ್ಲು ಬಂಡೆಗಳ ಗುಹೆಯಲ್ಲಿ ಸಿಲುಕಿದ್ದಾಳೆ.
ನೀರಲ್ಲಿ ಬಿದ್ದ ಯುವತಿ ಸಾವನ್ನಪ್ಪಿದ್ದಾಳೆ ಎಂದೇ ಹೇಳಲಾಗಿತ್ತು. ಆದರೆ ಯುವತಿ ಕಲ್ಲಿನ ಗಹೆಯಲ್ಲಿ ರಭಸವಾಗಿ ಹರಿಯುತ್ತಿದ್ದ ನೀರಲ್ಲಿ ಒಂದು ಕಲ್ಲಿನ ಮೇಲೆ ಸತತ 12 ಗಂಟೆ ಕಾಲ ಮಂಡಿಯೂರಿ ಕುಳಿತು ಜೀವರಕ್ಷಿಸಿಕೊಂಡಿದ್ದಾಳೆ. ಯಾರಾದರೂ ರಕ್ಷಣಾ ಕಾರ್ಯಾಚರಣೆಗೆ ಬರುತ್ತಾರೆ ಎಂಬ ಆತ್ಮವಿಶ್ವಾಸದಲ್ಲಿಯೇ ರಾತ್ರಿಯಿಡಿ ಕಳೆದಿದ್ದು, ನಿಜಕ್ಕೂ ಆಕೆಯ ಧೈರ್ಯ ಮೆಚ್ಚಲೇಬೇಕು. ಸ್ನೇಹಿತರ ಮೂಲಕ ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ನಿರಂತರ ರಕ್ಷಣಾಕಾರ್ಯಾಚರಣೆ ನಡೆಸಿದ್ದಾರೆ. ಪವಾಡ ರೀತಿಯಲ್ಲಿ ಯುವತಿ ಬದುಕಿರುವುದು ಗೊತ್ತಾಗಿದೆ. ಹರಿಯುತ್ತಿದ್ದ ಜಲಪಾತದ ನಡುವೆ, ಕಲ್ಲು ಬಂಡೆಗಳ ನಡುವೆ ಸಿಲುಕಿದ್ದ ಯುವತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿ ಆರೋಗ್ಯವಾಗಿ ಬದುಕಿ ಬಂದಿದ್ದು, ಕುಟುಂಬದವರು, ಸ್ನೇಹಿತರು ನಿಟ್ಟುಸಿರುಬಿಟ್ಟಿದ್ದಾರೆ.