ಸಲಭವಾಗಿ ಕೈಗೆಟಕುವ ತೆಂಗಿನೆಣ್ಣೆಯನ್ನು ಬಳಸಿ ಸೌಂದರ್ಯದ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಆದರೆ ಅದನ್ನು ನಿರ್ಲಕ್ಷಿಸುವವರೇ ಹೆಚ್ಚು. ಆಕರ್ಷಕ ತ್ವಚೆ ಪಡೆಯಲು ತೆಂಗಿನೆಣ್ಣೆಯನ್ನು ಹೀಗೆ ಬಳಸಿ.
ತೆಂಗಿನ ಎಣ್ಣೆಯಲ್ಲಿ ವಿಟಮಿನ್ ಇ ಅಂಶ ಸಾಕಷ್ಟಿರುವುದರಿಂದ ಇದೊಂದು ಅತ್ಯುತ್ತಮ ಸ್ಕಿನ್ ಮಾಯಿಸ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಸ್ನಾನ ಮುಗಿಸಿ ಬಂದಾಕ್ಷಣ ಎರಡು ಹನಿ ತೆಂಗಿನೆಣ್ಣೆಯನ್ನು ಅಂಗೈಗೆ ಹಾಕಿಕೊಂಡು ಸರಿಯಾಗಿ ಉಜ್ಜಿ. ಬಳಿಕ ಕೈ ಕಾಲಿಗೆ ಹಚ್ಚಿಕೊಂಡರೆ ಚರ್ಮ ಸಿಪ್ಪೆ ಏಳುವ ಸಮಸ್ಯೆ ದೂರವಾಗುತ್ತದೆ.
ಡ್ಯಾನ್ಸ್, ನಾಟಕ ಅಥವಾ ಇತರ ಕಾರಣಗಳಿಗೆ ಮುಖ ತುಂಬಾ ಮೇಕಪ್ ಮಾಡಿಕೊಂಡಿದ್ದರೆ ಅದನ್ನು ತೆಗೆಯಲು ತೆಂಗಿನೆಣ್ಣೆಯನ್ನೇ ಬಳಸಿ. ಇದು ತುಟಿಗಳ ಮೇಲಿನ ಲಿಪ್ ಸ್ಟಿಕ್ ತೆಗೆಯಲೂ ನೆರವಾಗುತ್ತದೆ. ಸಣ್ಣ ಹತ್ತಿಯ ಚೂರನ್ನು ತೆಂಗಿನ ಎಣ್ಣೆಯಲ್ಲಿ ಅದ್ದಿ, ಮೇಕಪ್ ಮಾಡಿದ ಜಾಗವನ್ನು ಒತ್ತಿ ಒರೆಸಿ.
ಇದೊಂದು ನೈಸರ್ಗಿಕ ಸೌಂದರ್ಯ ವರ್ಧಕವಾಗಿದ್ದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಮೊಡವೆ ಕಲೆಗಳನ್ನು ನಿವಾರಿಸುತ್ತದೆ. ಮುಖದ ತೇವಾಂಶವನ್ನು ಕಾಪಾಡುತ್ತದೆ. ಸೂರ್ಯನ ಕಿರಣಗಳಿಂದ ಉಂಟಾಗುವ ಹಾನಿಯನ್ನು ತಪ್ಪಿಸುತ್ತದೆ.