ನವದೆಹಲಿ: ಪ್ರಚಾರಕ್ಕಾಗಿ ಸಲ್ಲದ ಬೇಡಿಕೆ ಇಟ್ಟು ನ್ಯಾಯಾಲಯದ ಸಮಯ ಹಾಳು ಮಾಡಿದ ಸಂದರ್ಭದಲ್ಲಿ ಛೀಮಾರಿ ಹಾಕಿಸಿಕೊಂಡ ಅನೇಕ ಪ್ರಕರಣಗಳು ನಡೆದಿವೆ. ಇದೇ ರೀತಿಯ ಬೇಡಿಕೆ ಇಟ್ಟ ವಕೀಲರೊಬ್ಬರಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.
ತಮ್ಮ ತವರು ಜಿಲ್ಲೆಯಾಗಿರುವ ಮಲಪ್ಪುರಂನ ತಿರೂರ್ ನಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಆದೇಶ ನೀಡಬೇಕು ಎಂದು ಕೇರಳದ ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದು, ಅರ್ಜಿಯ ಬಗ್ಗೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ದಕ್ಷಿಣ ರೈಲ್ವೇಗೆ ನಿರ್ದೇಶನ ನೀಡುವಂತೆ ಸಲ್ಲಿಸಿದ್ದ ಮನವಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದ್ದರ ವಿರುದ್ಧ ವಕೀಲರೊಬ್ಬರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್ ಪೀಠ ವಕೀಲರಿಗೆ ಛೀಮಾರಿ ಹಾಕಿದೆ.
ಸುಪ್ರೀಂಕೋರ್ಟ್ ಅನ್ನು ಪೋಸ್ಟ್ ಆಫೀಸ್ ಎಂದು ಭಾವಿಸಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದೆ. ರೈಲು ನಿಲುಗಡೆ ಮಾಡುವುದು ಸರ್ಕಾರದ ನೀತಿಯ ಭಾಗವಾಗಿದ್ದು, ಅಧಿಕಾರಿಗಳಿಗೆ ಮನವಿ ಸಲ್ಲಿಸಿ. ಕೋರ್ಟ್ ಏನು ಮಾಡಲು ಸಾಧ್ಯ? ಯಾವ ನಿಲ್ದಾಣದಲ್ಲಿ ರೈಲು ನಿಲ್ಲಿಸಬೇಕೆಂದು ಎಂಬುದನ್ನು ನಾವು ನಿರ್ಧರಿಸಲು ನೀವು ಬಯಸುತ್ತೀರಾ? ಎಂದು ಪ್ರಶ್ನಿಸಿದ ನ್ಯಾಯಪೀಠ ಛೀಮಾರಿ ಹಾಕಿ ವಕೀಲನ ಅರ್ಜಿಯನ್ನು ವಜಾಗೊಳಿಸಿದೆ.