ನಾಗರ ಪಂಚಮಿ ನಾಡಿನ ದೊಡ್ಡ ಹಬ್ಬ. ಶ್ರಾವಣ ಮಾಸದ ಆರಂಭದಲ್ಲಿ ಬರುವ ಮೊದಲ ಹಬ್ಬ ನಾಗರ ಪಂಚಮಿ. ಚೌತಿಯ ನಂತರ ಬರುವ ಪಂಚಮಿಗೆ ವಿಶೇಷ ಸ್ಥಾನವಿದೆ. ಪಂಚಮಿ ಹಬ್ಬ ಬಂದರೆ ಹೆಣ್ಣುಮಕ್ಕಳು ತವರಿನ ದಾರಿ ಕಾಯುತ್ತಾರೆ. ಅಣ್ಣ ಕರೆಯಲು ಇನ್ನೂ ಯಾಕೋ ಬಂದಿಲ್ಲ ಎಂದು ಪರಿತಪಿಸುತ್ತಾರೆ.
ನಾಗರಪಂಚಮಿಯಂದು ಕಲ್ಲಿನ ನಾಗರಕ್ಕೆ, ಹಾವಿನ ಹುತ್ತಕ್ಕೆ ಹಾಲೆರೆಯುತ್ತಾರೆ. ಈಗ ಪಟ್ಟಣಗಳಲ್ಲಿ ಹುತ್ತಗಳು ಕಾಣಸಿಗುವುದೇ ಅಪರೂಪ. ಹಾಗಾಗಿ ಮಣ್ಣಿನಿಂದ ರಚಿಸಿರುವ ಹಾವಿಗೆ ಹಾಲೆರೆಯುವುದು ಸಾಮಾನ್ಯವಾಗಿದೆ. ಮತ್ತೆ ಕೆಲವರು ಹಾವಾಡಿಗರು ತಂದ ನಿಜ ನಾಗರಕ್ಕೆ ಹಾಲು ಹಾಕುತ್ತಾರೆ. ಪ್ರಕೃತಿ ಪೂಜೆಗಳಲ್ಲಿ ನಾಗಾರಾಧನೆ, ನಾಗಪೂಜೆ ಮಹತ್ವ ಪಡೆದುಕೊಂಡಿವೆ. ನಾಗದೇವತೆಯನ್ನು ಆರಾಧಿಸುವುದರಿಂದ ಇಷ್ಟಾರ್ಥ ಸಿದ್ದಿಸುತ್ತದೆ ಎಂಬ ನಂಬಿಕೆ ಜನರಲ್ಲಿದೆ.
ಆದರೆ ಪೂರ್ವಜರು ಹೇಳುವಂತೆ, ತಜ್ಞರೂ ಕೂಡ ಅಭಿಪ್ರಾಯಪಡುವಂತೆ ಹಾವಿಗೆ ಹಾಲೆರೆಯುವುದರಲ್ಲೂ ಒಂದು ವಿಶೇಷವಿದೆ. ಮಳೆಗಾಲದಲ್ಲಿ ಹಾವುಗಳು ಮಿಲನ ಹೊಂದುತ್ತವೆ. ಆ ಹುತ್ತದ ಮಣ್ಣು ಫಲವತ್ತತೆ ಪಡೆಯುತ್ತದೆ. ಆ ಮಣ್ಣಿನ ವಾಸನೆಯನ್ನು ಗ್ರಹಿಸುವ ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಬೇಗ ಗರ್ಭ ಧರಿಸುತ್ತಾರೆ ಎಂಬ ನಂಬಿಕೆ ಕೂಡ ಇದೆ. ಹಾಗಾಗಿ ಶ್ರಾವಣ ಮಾಸದಲ್ಲಿ ನಾಗದೇವರಿಗೆ ಹಾಲೆರೆಯುವ ಮೂಲಕ ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ.
ಪೂಜೆಗಾಗಿ ಉಂಡೆ ಮೊದಲಾದ ತಿನಿಸು ಇಟ್ಟು ಪೂಜಿಸಿ ನೈವೇದ್ಯ ಮಾಡುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ನಾಗರಪಂಚಮಿಯನ್ನು ವಿಶೇಷವಾಗಿ ಆಚರಿಸುತ್ತಾರೆ. ನಾಗ ಪೂಜೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಹಬ್ಬದೊಂದಿಗೆ ಹಬ್ಬಗಳ ಸಾಲು ಆರಂಭವಾಗುತ್ತದೆ. ಹೆಣ್ಣುಮಕ್ಕಳಿಗಂತೂ ಶ್ರಾವಣಮಾಸ ಅಚ್ಚುಮೆಚ್ಚು.