ನವದೆಹಲಿ: ಪ್ರಮುಖ ಸಾಮಾಜಿಕ ಜಾಲತಾಣವಾಗಿರು ಟ್ವಿಟರ್ ನಿಂದ ಹಿಂದೂ ದೇವತೆಗೆ ಸಂಬಂಧಿಸಿದ ಆಕ್ಷೇಪಾರ್ಹ ಚಿತ್ರಗಳನ್ನು ತೆಗೆದು ಹಾಕುವಂತೆ ದೆಹಲಿ ಹೈಕೋರ್ಟ್ ತಾಕೀತು ಮಾಡಿದೆ.
ಟ್ವಿಟ್ಟರ್ ಉತ್ತಮವಾಗಿ ಕೆಲಸ ಮಾಡುತ್ತಿದೆ. ಇದರಿಂದ ಜನರಿಗೆ ಸಂತೋಷವಾಗುತ್ತಿದೆ ಎಂದು ಹೇಳಿದ ನ್ಯಾಯಪೀಠ, ಹಿಂದೂ ದೇವತೆಗಳಿಗೆ ಸಂಬಂಧಿಸಿದ ಆಕ್ಷೇಪಾರ್ಹ ಚಿತ್ರಗಳನ್ನು ತೆಗೆಯಬೇಕು ಎಂದು ಹೇಳಿದ್ದು, ಆಕ್ಷೇಪಾರ್ಹ ಫೋಟೋಗಳನ್ನು ತೆಗೆದುಹಾಕಲಾಗುತ್ತದೆಯೇ? ಇಲ್ಲವೇ? ಎಂದು ಟ್ವಿಟರ್ ವಕೀಲರನ್ನು ಪ್ರಶ್ನಿಸಿದೆ.
ಸಾಮಾನ್ಯ ಜನರ ಭಾವನೆಗಳನ್ನು ಟ್ವಿಟರ್ ಗೌರವಿಸಬೇಕು. ಸಾಮಾನ್ಯ ಜನರ ಭಾವನೆಗಳಿಗೆ ಪ್ರಾಮುಖ್ಯತೆ ನೀಡಬೇಕು. ಈ ರೀತಿ ಆಕ್ಷೇಪಾರ್ಹ ಫೋಟೋಗಳನ್ನು ಏಕೆ ಹಾಕುತ್ತೀರಿ? ಇದನ್ನು ಕೂಡಲೇ ತೆಗೆದುಹಾಕಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್, ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ನ್ಯಾಯಪೀಠ ಹೇಳಿದೆ.
ರಾಹುಲ್ ಗಾಂಧಿಯವರ ಪ್ರಕರಣದಲ್ಲಿಯೂ ನೀವು ಅದನ್ನು ಮಾಡಬೇಕು ಎಂದು ಟ್ವಿಟರ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ಅವರಿಗೆ ಸೂಚಿಸಲಾಗಿದೆ. ನ್ಯಾಯಾಲಯದ ಆದೇಶವನ್ನು ಪಾಲಿಸಲಾಗುವುದು ಎಂದು ವಕೀಲರು ತಿಳಿಸಿದ್ದು, ನವೆಂಬರ್ 30ರಂದು ಪ್ರಕರಣದ ಹೆಚ್ಚಿನ ವಿಚಾರಣೆ ನಡೆಸಲಾಗುತ್ತದೆ.
ಅರ್ಜಿದಾರ ಆದಿತ್ಯ ಸಿಂಗ್ ದೇಶಪಾಲ್ ಅವರು ಕಾಳಿ ಮಾತೆಯ ಬಗ್ಗೆ ಅಸಹ್ಯಕರ ಪೋಸ್ಟ್ ಗಳನ್ನು ಟ್ವಿಟರ್ ನಲ್ಲಿ ಹಾಕಲಾಗಿದೆ. ಅತಿರೇಕದ ಮತ್ತು ಅವಮಾನಕರ ರೀತಿಯಲ್ಲಿ ದೇವರನ್ನು ಚಿತ್ರಿಸಲಾಗಿದೆ ಎಂದು ದೂರು ನೀಡಿದ್ದರು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಸಂಜಯ್ ಪೊದ್ದಾರ್ ಅವರು ವಾದ ಮಂಡಿಸಿ, ಮಾಹಿತಿ ತಂತ್ರಜ್ಞಾನ ನಿಯಮಗಳ ಉಲ್ಲಂಘನೆ ಇದಾಗಿದೆ. ನಿಯಮಗಳನ್ನು ಟ್ವಿಟರ್ ಅನುಸರಿಸಿಲ್ಲ ಎಂದು ದೂರಿದ್ದಾರೆ.
ಈ ವಿಷಯ ಕ್ರಮಕೈಗೊಳ್ಳುವ ವರ್ಗಕ್ಕೆ ಸೇರಿಲ್ಲ. ಆದುದರಿಂದ ಅದನ್ನು ತೆಗೆದು ಹಾಕುವುದಿಲ್ಲವೆಂದು ನಿರಾಕರಿಸಿದ ಬಗ್ಗೆ ವಕೀಲ ಸಂಜಯ್ ಹೇಳಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದೆಹಲಿ ಹೈಕೋರ್ಟ್, ಕೂಡಲೇ ಟ್ವಿಟರ್ ಪ್ಲಾಟ್ ಫಾರ್ಮ್ ನಿಂದ ಹಿಂದೂ ದೇವಿಗೆ ಸಂಬಂಧಿಸಿದ ಆಕ್ಷೇಪಾರ್ಹ ಫೋಟೋ ಅಳಿಸುವಂತೆ ತಾಕೀತು ಮಾಡಿದೆ.