ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ವಾಹನ ಪರವಾನಿಗೆ ಪರೀಕ್ಷೆ ವಿಚಾರದಲ್ಲಿ ಮಹತ್ವದ ಬದಲಾವಣೆಯೊಂದನ್ನ ಮಾಡಿದೆ. ಈ ಹೊಸ ಬದಲಾವಣೆಯ ಪ್ರಕಾರ ನೀವು ಮಾನ್ಯತೆ ಪಡೆದ ಚಾಲನಾ ತರಬೇತಿ ಕೇಂದ್ರದಲ್ಲಿ ಯಶಸ್ವಿಯಾಗಿ ವಾಹನೆ ಚಾಲನೆಯನ್ನ ಕಲಿತ ಬಳಿಕ ಆರ್ಟಿಓ ಕಚೇರಿಯಲ್ಲಿ ವಾಹನ ಚಾಲನಾ ಪರೀಕ್ಷೆಗೆ ಹಾಜರಾಗಬೇಕೆಂಬ ಅಗತ್ಯ ಇರೋದಿಲ್ಲ.
ಆದರೆ ನೀವು ಮಾನ್ಯತೆ ಪಡೆದ ವಾಹನ ಚಾಲನೆ ತರಬೇತಿ ಕೇಂದ್ರದಲ್ಲಿ ಟ್ರೇನಿಂಗ್ನ್ನು ಪೂರ್ತಿಗೊಳಿಸಿರಬೇಕು ಹಾಗೂ ಪರೀಕ್ಷೆಯಲ್ಲಿ ಪಾಸ್ ಆಗಬೇಕು. ಇದನ್ನ ಲೆಕ್ಕ ಪರಿಶೋಧನೆಗೆ ವಿದ್ಯುನ್ಮಾನವಾಗಿ ದಾಖಲು ಮಾಡಬೇಕು.
ಈ ಸಂಪೂರ್ಣ ಪ್ರಕ್ರಿಯೆಯು ಮಾನವ ರಹಿತ ಹಾಗೂ ಟೆಕ್ ಚಾಲಿತವಾಗಿರಲಿದೆ. ಸ್ಥಳ, ಚಾಲನಾ ಟ್ರ್ಯಾಕ್, ಐಟಿ ಹಾಗೂ ಬಯೋಮೆಟ್ರಿಕ್ ವ್ಯವಸ್ಥೆ ಹಾಗೂ ನಿಗದಿತ ಪಠ್ಯಕ್ರಮಗಳನ್ನ ಹೊಂದಿರುವ ವಾಹನ ಚಾಲನೆ ತರಬೇತಿ ಕೇಂದ್ರಗಳಿಂದ ಮಾನ್ಯತೆ ನೀಡಲಾಗುತ್ತದೆ.
ಒಮ್ಮೆ ಕೇಂದ್ರದಿಂದ ಪ್ರಮಾಣ ಪತ್ರ ಸಿಕ್ಕ ಬಳಿಕ ಅದು ನೇರವಾಗಿ ಮೋಟಾರು ವಾಹನ ಪರವಾನಿಗಿ ಕೇಂದ್ರದ ಅಧಿಕಾರಿಗಳಿಗೆ ಬಂದು ತಲುಪಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳಿದ್ದಾರೆ.
ಈ ಹೊಸ ನಿಯಮವು ಜುಲೈ ತಿಂಗಳಿನಿಂದ ಜಾರಿಗೆ ಬರಲಿದೆ. ಅಂದರೆ ಚಾಲನಾ ತರಬೇತಿ ಕೇಂದ್ರಗಳಲ್ಲಿ ಈ ಸೌಲಭ್ಯವನ್ನ ನೀಡಲು ಇಚ್ಚಿಸುವ ಸಂಸ್ಥೆಗಳು ಹಾಗೂ ವ್ಯಕ್ತಿಗಳು ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸಲು ಆರಂಭಿಸಬಹುದಾಗಿದೆ.