ಜಂತರ್ಮಂತರ್ನಲ್ಲಿ ಸತ್ಯಾಗ್ರಹ ನಡೆಸಲು ಅನುಮತಿ ನೀಡುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ರೈತ ಸಂಘಟನೆ ಕಿಸಾನ್ ಮಹಾಪಂಚಾಯತ್ಗೆ ಸರ್ವೋಚ್ಛ ನ್ಯಾಯಾಲಯ ಛಾಟಿ ಬೀಸಿದೆ.
ನೀವು ಇಡೀ ನಗರದ ಕತ್ತು ಹಿಸುಕಿದ್ದೀರಾ ಹಾಗೂ ಈಗ ನಗರದೊಳಗೂ ಪ್ರವೇಶಿಸಿ ಪ್ರತಿಭಟನೆ ಮಾಡಲು ಮುಂದಾಗಿದ್ದೀರಾ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕಿಸಾನ್ ಮಹಾಪಂಚಾಯತ್ಗೆ ಪ್ರಶ್ನೆ ಮಾಡಿದೆ.
ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಹಾಗೂ ಸಿ.ಟಿ. ರವಿಕುಮಾರ್ ನೇತೃತ್ವದ ನ್ಯಾಯಪೀಠವು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಗೆ ಮುಂದಾದ ರೈತ ಸಂಘಟನೆಯ ಪರ ವಕೀಲರಿಗೆ ಪ್ರತಿಭಟನಾ ನಿರತ ರೈತರು ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ. ರೈಲುಗಳನ್ನು ಹಾಗೂ ರಾಷ್ಟ್ರೀಯ ಹೆದ್ದಾರಿಯನ್ನು ತಡೆಯುತ್ತಿದ್ದಾರೆ ಎಂದು ಹೇಳಿದೆ.
ಪ್ರತಿಭಟನೆಯಿಂದಾಗಿ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿಯುಂಟಾಗುತ್ತಿದೆ. ಸಾರ್ವಜನಿಕರಿಗೂ ಮುಕ್ತವಾಗಿ ಹಾಗೂ ಭಯವಿಲ್ಲದೇ ಸಂಚರಿಸುವ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್ ಈ ಅರ್ಜಿ ಸಂಬಂಧ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿದೆ. ರಾಷ್ಟ್ರೀಯ ರಾಜಧಾನಿಯ ಗಡಿಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಬಂಧಿಸುತ್ತಿರುವುದು ನಡೆಯುತ್ತಿರುವ ಪ್ರತಿಭಟನೆಗಳ ಭಾಗವಲ್ಲ ಎಂದು ಘೋಷಿಸುವ ಅಫಿಡವಿಟ್ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚನೆ ನೀಡಿದೆ.