ಉತ್ತರ ಪ್ರದೇಶದ ಅಲಿಘರ್ ಜಿಲ್ಲೆಯಲ್ಲಿ ಸಚಿನ್ ಕುಮಾರ್ ಎಂಬ ಸಬ್ ಇನ್ಸ್ ಪೆಕ್ಟರ್ ತನಗೆ ಮ್ಯಾಜಿಸ್ಟ್ರೇಟ್ ಮಾನಸಿಕ ಕಿರುಕುಳ ನೀಡಿದ್ದಲ್ಲದೆ, ನಕಲಿ ಪ್ರಕರಣಗಳಲ್ಲಿ ಮುಸ್ಲಿಮರನ್ನು ಸಿಲುಕಿಸಿದ್ದೀಯಾ ಎಂದು ಸುಖಾಸುಮ್ಮನೆ ನನ್ನನ್ನು ಆರೋಪಿಸಿದ್ದಾರೆಂದು ಅವಲತ್ತುಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಸಚಿನ್ ಕುಮಾರ್ ರೈಲ್ವೇ ಹಳಿಯ ಬಳಿ ಕುಳಿತು ಆತ್ಮಹತ್ಯೆಗೆ ಯತ್ನಿಸುತ್ತಿರುವುದನ್ನು ಕಾಣಬಹುದು.
ಸೆಪ್ಟೆಂಬರ್ 17 ರಂದು ಸಬ್ ಇನ್ಸ್ ಪೆಕ್ಟರ್ ಸಚಿನ್ ಕುಮಾರ್ ಅವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಮ್ಯಾಜಿಸ್ಟ್ರೇಟ್ ಅಭಿಷೇಕ್ ತ್ರಿಪಾಠಿ ತನ್ನನ್ನು ಪದೇ ಪದೇ ಕ್ಯಾಬಿನ್‌ಗೆ ಕರೆದು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಸಚಿನ್ ಪತ್ರದಲ್ಲಿ ಆರೋಪಿಸಿದ್ದಾರೆ. ಇದಲ್ಲದೆ ಮುಸ್ಲಿಮರನ್ನು ಸುಮ್ಮನೆ ಬಂಧಿಸಿದ್ದೀಯ ಎಂದು ಮ್ಯಾಜಿಸ್ಟ್ರೇಟ್ ತಮ್ಮ ವಿರುದ್ಧ ಸುಖಾಸುಮ್ಮನೆ ಆರೋಪಿಸಿದ್ದಾರೆ ಎಂದು ದೂರಿದರು.
ಬನ್ನಾದೇವಿ ಪೊಲೀಸ್ ಠಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಸಚಿನ್ ಕುಮಾರ್ ಐವರು ಬೈಕ್ ಕಳ್ಳರಾದ ಅದೀಬ್, ಫೈಜ್, ಅರ್ಬಾಜ್, ಅಮೀರ್ ಮತ್ತು ಶಾಕಿರ್‌ನ ರಿಮಾಂಡ್ ಕೋರಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಸಬ್ ಇನ್ಸ್ ಪೆಕ್ಟರ್ ಸಚಿನ್ ಕುಮಾರ್ ಈ ಕಳ್ಳರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು ಮತ್ತು ತನಿಖಾಧಿಕಾರಿ (ಐಒ) ಕೂಡ ಆಗಿದ್ದರು.
ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಏಳು ಕದ್ದ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಆರೋಪಿಗಳಿಂದ ಸ್ಕೂಟಿ ಮತ್ತು ಮೋಟಾರ್ ಬಿಡಿಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಬಂಧನಕ್ಕಾಗಿ ಸಚಿನ್ ಕುಮಾರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವನ್ನು ತಲುಪಿದಾಗ, ಮ್ಯಾಜಿಸ್ಟ್ರೇಟ್ ಅಭಿಷೇಕ್ ತ್ರಿಪಾಠಿ ಅವರು ಗಂಟೆಗಳ ಕಾಲ ಅವರನ್ನು ಕಾಯುವಂತೆ ಮಾಡಿದರು. ರಾತ್ರಿ 10 ಗಂಟೆಯವರೆಗೆ ಕಾಯುವಂತೆ ಮಾಡುವುದರ ಜೊತೆಗೆ ಮ್ಯಾಜಿಸ್ಟ್ರೇಟ್ ಅವರು ಸಚಿನ್ ಕುಮಾರ್ ಅವರನ್ನು ವಿಶ್ರಾಂತಿ ಕೊಠಡಿಗೆ ಹಲವು ಬಾರಿ ಕರೆದು ಅನುಚಿತವಾಗಿ ವರ್ತಿಸಿದರು ಎನ್ನಲಾಗಿದೆ. ಸಚಿನ್ ಕುಮಾರ್ ಪ್ರಕಾರ, ಮ್ಯಾಜಿಸ್ಟ್ರೇಟ್, ಅವರಿಗೆ ಬೆದರಿಕೆ ಹಾಕಿ “ನೀವು ಮುಸ್ಲಿಮರನ್ನು ತಪ್ಪಾಗಿ ಸಿಲುಕಿಸಿ ಇಲ್ಲಿಗೆ ಕರೆ ತಂದಿದ್ದೀರಿ.” ಎಂದು ಹೇಳಿದ್ದರಂತೆ
ಪತ್ರಕರ್ತ ಅಜಯ್ ದ್ವಿವೇದಿ ಈ ಬಗ್ಗೆ ಎಕ್ಸ್ ನಲ್ಲಿ ಸೆಪ್ಟೆಂಬರ್ 17 ರಂದು ಸಚಿನ್ ಕುಮಾರ್ ನೀಡಿದ್ದ ಲಿಖಿತ ದೂರು ಮತ್ತು ವಿಡಿಯೋ ಹಂಚಿಕೊಂಡಿದ್ದಾರೆ. ವಾಹನ ಕಳವು ಪ್ರಕರಣದಲ್ಲಿ ಹೆಸರಿಸಲಾದ ಅದೀಬ್, ಫೈಜ್, ಅರ್ಬಾಜ್, ಅಮೀರ್ ಮತ್ತು ಶಾಕಿರ್ ಅವರ ಬಂಧನವನ್ನು ಅನುಮೋದಿಸಲು ಸೆಪ್ಟೆಂಬರ್ 16 ರಂದು ಸಂಜೆ 4 ಗಂಟೆಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹೋಗಿದ್ದೆ ಎಂದು ಈ ದೂರಿನಲ್ಲಿ ಸಚಿನ್ ಕುಮಾರ್ ಉಲ್ಲೇಖಿಸಿದ್ದಾರೆ.
ದೂರಿನ ಪ್ರಕಾರ ಆರೋಪಿಗಳ ಬಂಧನಕ್ಕೆ ಒಪ್ಪಿಗೆ ಕೋರಿ ಎಸ್ ಐ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಲಾಯಿತು ಅಷ್ಟೇ ಅಲ್ಲದೇ ಸಬ್ ಇಸ್ ಪೆಕ್ಟರ್ ಗೆ ಚಿತ್ರಹಿಂಸೆ ನೀಡಲಾಯಿತು ಎನ್ನಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಸಬ್ ಇನ್ಸ್ ಪೆಕ್ಟರ್ ತನ್ನ ಸಂಕಷ್ಟವನ್ನು ದೂರಿನಲ್ಲಿ ವಿವರಿಸಿದ್ದಾರೆ.
ಎಸ್‌ಐ ಸಚಿನ್ ಕುಮಾರ್ ಮಾಡಿದ ಆರೋಪಗಳು ನಿಜವೆಂದು ಸಾಬೀತಾದರೆ, ಅದು ನ್ಯಾಯಾಂಗ ವ್ಯವಸ್ಥೆಯನ್ನು ಪ್ರಶ್ನಿಸುತ್ತದೆ ಎಂದು ಅನೇಕ ಕಾನೂನು ತಜ್ಞರು ಹೇಳಿದ್ದಾರೆ. ಕರ್ತವ್ಯನಿರತ ಪೋಲೀಸ್ ಅಧಿಕಾರಿಯ ವಿರುದ್ಧ ಇಂತಹ ಅನುಚಿತ ವರ್ತನೆಯು ಅವರ ನೈತಿಕತೆಯನ್ನು ಕಡಿಮೆ ಮಾಡುವುದಲ್ಲದೆ ಕಾನೂನು ವ್ಯವಸ್ಥೆಯ ನ್ಯಾಯಸಮ್ಮತತೆಯನ್ನು ದುರ್ಬಲಗೊಳಿಸುತ್ತದೆ. ಇದು ಪೊಲೀಸ್ ಅಧಿಕಾರಿ ಮತ್ತು ಮ್ಯಾಜಿಸ್ಟ್ರೇಟ್ ನಡುವಿನ ಚರ್ಚೆಗಿಂತ ಹೆಚ್ಚು ಎಂದಿದ್ದಾರೆ.