ಮದುವೆ, ಹಬ್ಬ, ವಾರ್ಷಿಕೋತ್ಸವ, ಕುಟುಂಬದಲ್ಲಿ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಇಂಥ ಸಂದರ್ಭಗಳಲ್ಲಿ ಸ್ನೇಹಿತರು, ಕುಟುಂಬಸ್ಥರಿಗೆ ವಿಶೇಷ ಉಡುಗೊರೆಗಳನ್ನು ನೀಡುವುದು ಸಾಮಾನ್ಯ ಸಂಗತಿ.
ಮದುವೆ, ಸಮಾರಂಭಗಳಲ್ಲಿ ಉಡುಗೊರೆ ಕೊಡುವುದನ್ನು, ಶುಭಕೋರುವುದನ್ನು ನಮ್ಮ ಜನರು ಬಿಟ್ಟಿಲ್ಲ. ಉಡುಗೊರೆ ಚಿಕ್ಕದಾಗಿರಲಿ ಇಲ್ಲ ದೊಡ್ಡದಾಗಿರಲಿ, ಅದ್ರ ಪ್ಯಾಕಿಂಗ್ ಬಗ್ಗೆ ಈಗ ಹೆಚ್ಚಿನ ಗಮನ ನೀಡಲಾಗ್ತಿದೆ.
ಒಳಗೆ ಯಾವ ವಸ್ತುವಿದೆ ಎನ್ನುವುದಕ್ಕಿಂತ ಗಿಫ್ಟ್ ಪ್ಯಾಕ್ ಹೇಗೆ ಮಾಡಲಾಗಿದೆ ಎಂಬುದು ಮಹತ್ವ ಪಡೆಯುತ್ತಿದೆ. ಒಂದು ಕವರ್ ನಲ್ಲಿ ಉಡುಗೊರೆ ಹಾಕಿ ಕೊಡುವ ಪದ್ಧತಿ ಈಗಿಲ್ಲ. ಹೂ, ಬಣ್ಣ ಬಣ್ಣದ ಬಟ್ಟೆ, ಪೇಪರ್, ಕವರ್, ಕುಂದನ್ ಹೀಗೆ ಬೇರೆ ಬೇರೆ ಅಲಂಕಾರಿಕ ವಸ್ತುಗಳನ್ನು ಬಳಸಿ ಉಡುಗೊರೆ ಸಿದ್ಧಪಡಿಸಲಾಗ್ತಿದೆ. ಈ ಗಿಫ್ಟ್ ಪ್ಯಾಕಿಂಗ್ ಈಗ ಮನೆಯಲ್ಲಿರುವ ಸೃಜನಶೀಲ ಮಹಿಳೆಯರಿಗೆ ಒಂದೊಳ್ಳೆ ಉದ್ಯೋಗವಾಗಿದೆ.
ಅನೇಕರು ಗಿಫ್ಟ್ ಪ್ಯಾಕಿಂಗ್ ಉದ್ಯೋಗಕ್ಕೆ ಧುಮುಕುತ್ತಿದ್ದಾರೆ. ಆರಂಭದಲ್ಲಿ ಇದಕ್ಕೆ ತುಂಬಾ ಬಂಡವಾಳ ಬೇಡ. ಸಣ್ಣದಾಗಿ ಉದ್ಯೋಗ ಶುರುಮಾಡಬಹುದು. ಆರಂಭದಲ್ಲಿ ಕುಟುಂಬಸ್ಥರ ಅಥವಾ ಸ್ನೇಹಿತರ ಸಮಾರಂಭಗಳಲ್ಲಿ, ಶಾಲೆಯಲ್ಲಿ ಮಕ್ಕಳ ಗಿಫ್ಟ್ ಪ್ಯಾಕಿಂಗ್ ಶುರುಮಾಡಿ ನಂತ್ರ ಉದ್ಯೋಗವನ್ನು ವಿಸ್ತರಿಸಬಹುದು.
ಗಿಫ್ಟ್ ಪ್ಯಾಕ್ ಆಕರ್ಷಕವಾಗಿದ್ದರೆ ಮತ್ತಷ್ಟು ಮಂದಿ ನಿಮ್ಮನ್ನು ಹುಡುಕಿಕೊಂಡು ಬರ್ತಾರೆ. ಬಿಡುವಿನ ಸಮಯದಲ್ಲಿ ಮನೆಯಲ್ಲಿ ಅಥವಾ ಸಣ್ಣ ರೂಮಿನಲ್ಲಿ ಮಾಡುವಂತ ಕೆಲಸವಿದು. ಕಲೆಯಲ್ಲಿ ಆಸಕ್ತಿಯಿದ್ದರೆ ಇಂದಿನಿಂದಲೇ ಈ ಉದ್ಯೋಗ ಶುರುಮಾಡಿ. ಸಾಮಾಜಿಕ ಜಾಲತಾಣ ಹಾಗೂ ನೆಟ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು, ನಿಮ್ಮ ಕಲೆಯನ್ನು ಹೆಚ್ಚೆಚ್ಚು ಪ್ರದರ್ಶನ ಮಾಡಿದಲ್ಲಿ ಕೈ ತುಂಬಾ ಕೆಲಸ ಸಿಗೋದ್ರಲ್ಲಿ ಎರಡು ಮಾತಿಲ್ಲ.