ಇತ್ತೀಚಿನ ದಿನಗಳಲ್ಲಿ ಚಂದ್ರನ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಭಾರತದ ಚಂದ್ರಯಾನ 3 ಯಶಸ್ಸು ಕೂಡ ಇದಕ್ಕೆ ಕಾರಣ. ಇದು ಚಂದ್ರನ ಅನೇಕ ರಹಸ್ಯಗಳನ್ನು ಬಹಿರಂಗಪಡಿಸಲಿದೆ. ಈ ಮಧ್ಯೆ ಚಂದ್ರನ ಮೇಲೆ ಭೂಮಿ ಖರೀದಿಸಬಹುದೇ ಎಂಬ ಪ್ರಶ್ನೆ ಅನೇಕರ ಮನಸ್ಸಿನಲ್ಲಿರಬಹುದು. ಈಗಾಗಲೇ ಹಲವು ಕಂಪನಿಗಳು ಚಂದ್ರನ ಮೇಲೆ ಭೂಮಿ ಮಾರಾಟ ಮಾಡಿರುವುದು, ಖರೀದಿಸಿರುವ ಮಾಹಿತಿ ನಿಮಗೂ ಸಿಕ್ಕಿರಬಹುದು. ಆದರೆ ವಾಸ್ತವ ಏನು ಗೊತ್ತಾ? ಭೂಮಿಯ ಮೇಲಿನ ಯಾವುದೇ ದೇಶವು ಬಾಹ್ಯಾಕಾಶದ ಮೇಲೆ ಯಾವುದೇ ಹಕ್ಕನ್ನು ಹೊಂದಿಲ್ಲ.
ಯಾವುದೇ ದೇಶವು ಚಂದ್ರ, ನಕ್ಷತ್ರಗಳು ಮತ್ತು ಇತರ ಬಾಹ್ಯಾಕಾಶ ವಸ್ತುಗಳ ಮೇಲೆ ಯಾವುದೇ ಹಕ್ಕನ್ನು ಹೊಂದಿಲ್ಲ. ಈ ಬಗ್ಗೆ ಅಂತರಾಷ್ಟ್ರೀಯ ಬಾಹ್ಯಾಕಾಶ ಕಾನೂನು ಕೂಡ ಇದೆ. ಇದರಲ್ಲಿ ಐದು ಒಪ್ಪಂದಗಳು ಮತ್ತು ನಿಬಂಧನೆಗಳಿವೆ. ಬಾಹ್ಯಾಕಾಶವನ್ನು ಸ್ವಾಧೀನಪಡಿಸಿಕೊಳ್ಳದಿರುವುದು, ಶಸ್ತ್ರಾಸ್ತ್ರ ನಿಯಂತ್ರಣ, ಪರಿಶೋಧನೆಯ ಸ್ವಾತಂತ್ರ್ಯ, ಬಾಹ್ಯಾಕಾಶ ವಸ್ತುಗಳಿಂದ ಉಂಟಾದ ಹಾನಿಯ ಹೊಣೆಗಾರಿಕೆ, ಬಾಹ್ಯಾಕಾಶ ನೌಕೆ ಮತ್ತು ಗಗನಯಾತ್ರಿಗಳ ಸುರಕ್ಷತೆ ಮತ್ತು ಭದ್ರತೆ ಇವನ್ನೆಲ್ಲ ಈ ಕಾನೂನು ಒಳಗೊಂಡಿದೆ.
ಹಾಗಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ಕಾನೂನು, ಚಂದ್ರನ ಮೇಲೆ ಭೂಮಿಯನ್ನು ಖರೀದಿಸುವುದನ್ನು ಕಾನೂನುಬದ್ಧವಾಗಿ ಗುರುತಿಸುವುದಿಲ್ಲ. ಕೆಲವು ಕಂಪನಿಗಳು ಈ ಕಾನೂನನ್ನು ಪರಿಗಣಿಸಲಾಗುವುದಿಲ್ಲವೆಂದು ವಾದಿಸುತ್ತವೆ. ಆ ಕಂಪನಿಗಳು ಚಂದ್ರನ ಮೇಲೆ ಕಾನೂನುಬದ್ಧವಾಗಿ ಭೂಮಿ ಖರೀದಿಸಬಹುದು ಎಂದು ಹೇಳುತ್ತವೆ. ಲೂನಾರ್ ಸೊಸೈಟಿ ಇಂಟರ್‌ನ್ಯಾಶನಲ್ ಮತ್ತು ಇಂಟರ್‌ನ್ಯಾಶನಲ್ ಲೂನಾರ್ ಲ್ಯಾಂಡ್ಸ್ ರಿಜಿಸ್ಟ್ರಿ ಚಂದ್ರನ ಮೇಲೆ ಭೂಮಿಯನ್ನು ಮಾರಾಟ ಮಾಡುವುದಾಗಿ ಹೇಳಿಕೊಳ್ಳುತ್ತವೆ. ಅವರ ಮೂಲಕ ಅನೇಕ ಜನರು ಚಂದ್ರನ ಮೇಲೆ ಭೂಮಿ ಖರೀದಿಸಿದ್ದಾರೆ.
ಇನ್ನು ಬೆಲೆಗಳನ್ನು ನೋಡೋದಾದ್ರೆ, Lunarregistry.com ಪ್ರಕಾರ, ಚಂದ್ರನ ಮೇಲೆ ಒಂದು ಎಕರೆ ಭೂಮಿಯ ಬೆಲೆ 37.50 ಡಾಲರ್, ಅಂದರೆ ಸುಮಾರು 3,080 ರೂಪಾಯಿ. ಚಂದ್ರನ ಮಾಲೀಕತ್ವವನ್ನು ಹೊಂದಲು ಯಾರಿಗೂ ಹಕ್ಕಿಲ್ಲ. ಬಾಹ್ಯಾಕಾಶ ಕಾನೂನಿನ ಪುಸ್ತಕಗಳ ಲೇಖಕ ಡಾ.ಜಿಲ್ ಸ್ಟುವರ್ಟ್ ಅವರು ದಿ ಮೂನ್ ಎಕ್ಸಿಬಿಷನ್ ಬುಕ್ ಎಂಬ ಪುಸ್ತಕವನ್ನೂ ಬರೆದಿದ್ದಾರೆ. ಜನರು ಈಗ ಚಂದ್ರನಲ್ಲಿ ಭೂಮಿ ಖರೀದಿಸಿ ಉಡುಗೊರೆ ನೀಡುವುದನ್ನು ಫ್ಯಾಷನ್ ಟ್ರೆಂಡ್ ಮಾಡಿಕೊಂಡಿದ್ದಾರೆಂದು ಉಲ್ಲೇಖಿಸಿದ್ದಾರೆ.
ಆದರೆ ಚಂದ್ರನ ಮೇಲೆ ಮಾಲೀಕತ್ವದ ಹಕ್ಕು ಯಾರಿಗೂ ಇಲ್ಲ. ಆದರೂ ಇದು ಕೋಟ್ಯಂತರ ರೂಪಾಯಿ ವ್ಯವಹಾರವಾಗಿಬಿಟ್ಟಿದೆ. ಎಕರೆಗೆ ಕೇವಲ 3 ಸಾವಿರ ರೂಪಾಯಿ ವೆಚ್ಚವಿರುವುದರಿಂದ ಜನರು ಯೋಚನೆ ಮಾಡದೆಯೇ ಖರೀದಿಸುತ್ತಿದ್ದಾರೆ.