ಬೆಂಗಳೂರು : ಮನೆಯ ಯಜಮಾನಿಯರಿಗೆ 2,000 ರೂ. ಸಹಾಯಧನ ನೀಡುವ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಒಂದೇ ದಿನದಲ್ಲಿ ಬರೋಬ್ಬರಿ 60 ಸಾವಿರಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದಾರೆ.
ಫಲಾನುಭವಿ ನೊಂದಣಿ ಪ್ರಕ್ರಿಯೆ ಎರಡು ವಿಧಾನದ ಮೂಲಕ ಮಾಡಲಾಗುತ್ತಿದೆ. ಮೊದಲನೇಯದಾಗಿ ಈಗಾಗಲೇ ಪಡಿತರ ಚೀಟಿಯಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಯ ಮೋಬೈಲ್ ಸಂಖ್ಯೆಗೆ ನೋಂದಣಿ ದಿನಾಂಕ, ಸಮಯ ಹಾಗೂ ನೊಂದಣಿ ಕೇಂದ್ರದ ವಿವರಗಳನ್ನು ಎಸ್.ಎಂ.ಎಸ್. ಮೂಲಕ ತಿಳಿಸಲಾಗುತ್ತದೆ.
ಮೊದಲಿಗೆ ಹೆಡ್ ಆಫ್ ದ ಫ್ಯಾಮಿಲಿ ಆಧಾರ್ ಕಾರ್ಡ್ ಅಲ್ಲಿ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ 8147500500 ಈ ಮೊಬೈಲ್ ಸಂಖ್ಯೆಗೆ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು SMS ಮೂಲಕ ಕಳುಹಿಸಬೇಕು.
SMS ಕಳುಹಿಸಿದ ಕೆಲವೇ ಕ್ಷಣಗಳಲ್ಲಿ ನಿಮಗೆ VM-SEVSIN ಕರ್ನಾಟಕ ಸರ್ಕಾರದ ವತಿಯಿಂದ ನೀವು ಯಾವ ದಿನಾಂಕದಲ್ಲಿ ಯಾವ ಸಮಯಕ್ಕೆ ಯಾವ ಸ್ಥಳದಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು ಎಂಬ ಮೆಸೇಜ್ ಬರುತ್ತದೆ. ಒಂದು ವೇಳೆ ಮೆಸೇಜ್ ಬಾರದಿದ್ದರೆ ಅದು ಸರ್ವರ್ ಸಮಸ್ಯೆ ಆಗಿರುತ್ತದೆ, ಆದ್ದರಿಂದ ಮತ್ತೆ ನೀವು ಸಂದೇಶ ಕಳುಹಿಸಬೇಕು. ನಿಮಗೆ SMS ಮೂಲಕ ಯಾವ ಗ್ರಾಮದಲ್ಲಿ ಯಾವ ಕೇಂದ್ರದಲ್ಲಿ ಯಾವ ಸಮಯಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕು ಎನ್ನುವ ಮಾಹಿತಿ ಬರುತ್ತದೆ.
ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಫಲಾನುಭವಿಗಳು ಗ್ರಾಮದ ಸಮೀಪವಿರುವ ಗ್ರಾಮ ಒನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ ಮತ್ತು ನಗರ ಪ್ರದೇಶದಲ್ಲಿ ವಾಸಿಸುವ ಫಲಾನುಭವಿಗಳು ಸಮೀಪದ ಕರ್ನಾಟಕ ಒನ್, ವಾರ್ಡ ಕಛೇರಿ, ಸ್ಥಳಿಯ ನಗರಾಡಳಿತ ಸಂಸ್ಥೆಯ ಕಛೇರಿ, ಗೃಹಲಕ್ಷ್ಮೀ ನೋಂದಣಿ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಇನ್ನು ಎರಡನೇ ವಿಧಾನವಾಗಿ “ಪ್ರಜಾಪ್ರತಿನಿಧಿ” (ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂ ಸೇವಕರು) ಫಲಾನುಭವಿಗಳ ಮನೆಗೆ ಭೇಟಿ ನೀಡಲಿದ್ದು, ಅವರಿಂದಲೂ ಸಹ ಸ್ಥಳದಲ್ಲಿಯೇ ನೊಂದಾಯಿಸಿಕೊಳ್ಳಬಹುದಾಗಿದೆ. ಒಂದು ವೇಳೆ ನಿಗದಿಪಡಿಸಿದ ದಿನಾಂಕ ಮತ್ತು ಸಮಯದಂದು ಗ್ರಾಮ ಒನ್, ಬಾಪೂಜಿ ಕೇಂದ್ರ, ಕರ್ನಾಟಕ ಒನ್ ಕೇಂದ್ರಗಳಿಗೆ ಹೋಗಲು ಸಾಧ್ಯವಾಗದೆ ಇದ್ದಲ್ಲಿ ಅದೇ ಸೇವಾ ಕೇಂದ್ರಗಳಿಗೆ ಮುಂದಿನ ಯಾವುದೇ ದಿನಾಂಕದಂದು ಸಂಜೆ 5 ರಿಂದ 7 ಗಂಟೆಯೊಳಗೆ ಭೇಟಿ ನೀಡಿ ನೊಂದಾಯಿಸಿಕೊಳ್ಳಬಹುದಾಗಿದೆ.
ಗೃಹಲಕ್ಷ್ಮೀಯರಿಗೆ ಸರ್ವರ್ ಕಾಟ
ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಸರ್ವರ್ ಸಮಸ್ಯೆ ಕಾಡಿದೆ. ಮೊಬೈಲ್ ಗಳಿಗೆ ಸಂದೇಶ ಬಾರದಿದ್ದರೂ ಬೆಂಗಳೂರು ಒನ್ ಕೇಂದ್ರಗಳಿಗೆ ಬಂದು ಮಹಿಳೆಯರು ಪರದಾಡಿದರು. ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರಗಳು, ಕರ್ನಾಟಕ ಒನ್ ಮತ್ತು ಗೃಹಲಕ್ಷ್ಮೀ ಯೋಜನೆ ನೊಂದಣಿ ಸೇವಾ ಕೇಂದ್ರಗಳಳಲ್ಲಿ ಅರ್ಜಿ ಸಲ್ಲಿಕೆಗೆ ಸರ್ವರ್ ಸಮಸ್ಯೆಯಾಗುತ್ತಿದ್ದು, ಮಹಿಳೆಯರು ನಿನ್ನೆ ಬೆಳಗ್ಗೆಯಿಂದ ಕಾದು ಕಾದು ಸಾಕಾಗಿದ್ದಾರೆ.