
ಭಾರತೀಯರಿಗೆ ಸಾರಿಗೆ ಜೀವಾಳ ರೈಲು. ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಅನೇಕ ನಿಯಮಗಳನ್ನು ಜಾರಿಗೆ ತಂದಿದೆ. ಅದ್ರಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ಕೂಡ ಸೇರಿದೆ. ಅನೇಕ ಬಾರಿ ಪ್ರಯಾಣಿಕರ ಜೊತೆ ರೈಲ್ವೆ ನಿಲ್ದಾಣಕ್ಕೆ ಹೋಗುವ ಅನಿವಾರ್ಯತೆ ನಮಗೆ ಎದುರಾಗುತ್ತದೆ. ಈ ಸಮಯದಲ್ಲಿ ನಾವು ಪ್ಲಾಟ್‌ಫಾರ್ಮ್ ಟಿಕೆಟ್ ಖರೀದಿ ಮಾಡಬೇಕು. ಈ ಟಿಕೆಟ್ ಗೆ ಸಂಬಂಧಿಸಿದಂತೆ ಅನೇಕ ನಿಯಮಗಳಿವೆ.
ಹತ್ತು ರೂಪಾಯಿ ನೀಡಿ ನೀವು ಪ್ಲಾಟ್‌ಫಾರ್ಮ್ ಟಿಕೆಟ್ ಖರೀದಿ ಮಾಡಬೇಕು. ಈ ಟಿಕೆಟ್ 2 ಗಂಟೆಗಳವರೆಗೆ ಮಾನ್ಯವಾಗಿರುತ್ತದೆ. ಅನೇಕ ಬಾರಿ ತುರ್ತು ಪರಿಸ್ಥಿತಿಯಲ್ಲಿ ಇಲ್ಲವೆ ಆತುರದಲ್ಲಿ ರೈಲು ಏರಿರ್ತೇವೆ. ನಮ್ಮ ಬಳಿ ರೈಲಿನ ಟಿಕೆಟ್ ಇರೋದಿಲ್ಲ. ಈ ಸಮಯದಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ಮೂಲಕವೇ ಪ್ರಯಾಣ ಬೆಳೆಸಬಹುದೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ನೀವು ಪ್ಲಾಟ್‌ಫಾರ್ಮ್ ಟಿಕೆಟ್ ಹಿಡಿದು ರೈಲು ಏರಿದ್ದರೆ ತಕ್ಷಣ ಟಿಟಿಇಯನ್ನು ಸಂಪರ್ಕಿಸಬೇಕು. ಮುಂದಿನ ನಿಲ್ದಾಣಕ್ಕೆ ಟಿಕೆಟ್ ಪಡೆಯಬೇಕು. ಜೊತೆಗೆ 250 ರೂಪಾಯಿ ದಂಡ ನೀಡಬೇಕು. ಒಂದ್ವೇಳೆ ತುರ್ತು ಪರಿಸ್ಥಿತಿಯಲ್ಲಿ ನೀವು ರೈಲು ಪ್ರಯಾಣ ಮಾಡ್ತಿದ್ದರೆ ದಂಡದ ಜೊತೆ ನಿಮ್ಮ ಗಮ್ಯ ಸ್ಥಳದ ಟಿಕೆಟ್ ಪಡೆಯಬೇಕಾಗುತ್ತದೆ.
ನೀವು ಪ್ಲಾಟ್‌ಫಾರ್ಮ್ ಟಿಕೆಟ್ ಮಾತ್ರ ಹಿಡಿದು ರೈಲು ಪ್ರಯಾಣ ಮುಂದುವರೆಸಲು ಸಾಧ್ಯವಿಲ್ಲ. ಅದೇ ರೀತಿ ಪ್ಲಾಟ್‌ಫಾರ್ಮ್ ಟಿಕೆಟ್ ಇಲ್ಲದೆ ಪ್ಲಾಟ್‌ಫಾರ್ಮ್ ನಲ್ಲಿರಲು ಸಾಧ್ಯವಿಲ್ಲ. ಈ ಎರಡೂ ಅಪರಾಧವಾಗಿದ್ದು, ದಂಡ ಹಾಗೂ ಶಿಕ್ಷೆ ವಿಧಿಸಲಾಗುತ್ತದೆ.