ಹಣ್ಣುಗಳು ಮತ್ತು ಜ್ಯೂಸ್‌ಗಳನ್ನು ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಆದರೆ ಅವುಗಳನ್ನು ಪ್ಯಾಕ್ ಮಾಡಿದಾಗ ಹೆಚ್ಚುವರಿ ಪ್ರಮಾಣದ ಸಕ್ಕರೆ ಬಳಕೆಯಿಂದ ಆರೋಗ್ಯಕರವೆಂದು ಪರಿಗಣಿಸುವುದು ಕಷ್ಟವಾಗುತ್ತದೆ.
ಇದು ಕೇವಲ ಜ್ಯೂಸ್ ಅಷ್ಟೇ ಅಲ್ಲ, ಕಾಫಿ, ಚಹಾ ಮತ್ತು ಎಳನೀರು ಮುಂತಾದ ಪಾನೀಯಗಳು ಸಹ ಸಕ್ಕರೆ ಅಂಶವನ್ನು ಹೊಂದಿರುತ್ತವೆ ಎಂದು ತಜ್ಞರು ಹೇಳುತ್ತಾರೆ. “ತಯಾರಕರು ಸಾಮಾನ್ಯವಾಗಿ ಸುವಾಸನೆ ಮತ್ತು ಮಾಧುರ್ಯವನ್ನು ಹೆಚ್ಚಿಸಲು ಸಕ್ಕರೆಯನ್ನು ಸೇರಿಸುತ್ತಾರೆ. ಇದರಿಂದ ಅವರ ಉತ್ಪನ್ನಗಳು ಹೆಚ್ಚು ರುಚಿಕರ ಅನಿಸುತ್ತವೆ” ಎಂದು ಪೌಷ್ಟಿಕತಜ್ಞ ಎಶಾಂಕಾ ವಾಹಿ ಹೇಳಿದ್ದಾರೆ.
ಪಾನೀಯಗಳಲ್ಲಿ ಸೇರಿಸಿದ ಸಕ್ಕರೆಯ ಪ್ರಮಾಣವು ಬ್ರಾಂಡ್ ಮತ್ತು ಪಾನೀಯದ ಪ್ರಕಾರದ ಆಧಾರದ ಮೇಲೆ ಬದಲಾಗಬಹುದು. ಎಶಾಂಕಾ ವಾಹಿ ಅವರ ಪ್ರಕಾರ ಸರಾಸರಿಯಾಗಿ ಭಾರತೀಯರು, ಪ್ಯಾಕ್ ಮಾಡಿದ ಜ್ಯೂಸ್ ಅಥವಾ ಸುವಾಸನೆ ಭರಿತ ಪಾನೀಯದ ಪ್ರತಿ ಸೇವನೆಯಲ್ಲಿ 6 ರಿಂದ 20 ಗ್ರಾಂ ಸಕ್ಕರೆಯನ್ನು ಸೇವಿಸುತ್ತಾರೆ. ಅದು ಸುಮಾರು 1.5 ರಿಂದ 5 ಟೀ ಚಮಚ ಸಕ್ಕರೆಗೆ ಸಮನಾಗಿರುತ್ತದೆ ಎಂದಿದ್ದಾರೆ.
ಅತಿಯಾದ ಸಕ್ಕರೆ ಸೇವನೆಯು ಆರೋಗ್ಯವನ್ನು ಹಾಳುಮಾಡುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗಬಹುದು, ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ, ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗಬಹುದು ಮತ್ತು ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ.
“ಮಧುಮೇಹಿಗಳು ಸಕ್ಕರೆಯುಕ್ತ ಪಾನೀಯಗಳನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಹೆಚ್ಚಳಕ್ಕೆ ಕಾರಣವಾಗಬಹುದು ಮತ್ತು ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸವಾಲಾಗಬಹುದು” ಎಂದು ವಾಹಿ ಹೇಳಿದ್ದಾರೆ.
ಹೀಗಾಗಿ ಗ್ರಾಹಕರು ಪ್ಯಾಕ್ ಮಾಡಲಾದ ಪಾನೀಯಗಳ ಲೇಬಲ್‌ಗಳನ್ನು ಎಚ್ಚರಿಕೆಯಿಂದ ಓದುವುದು ಮತ್ತು ಅದರಲ್ಲಿನ ಸಕ್ಕರೆಯ ಅಂಶವನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. “ಸಾಧ್ಯವಾದಾಗಲೆಲ್ಲಾ ‘no added sugar’ ಅಥವಾ ‘unsweetened’ ಎಂದು ಲೇಬಲ್ ಮಾಡಲಾದ ಪಾನೀಯಗಳನ್ನು ಆರಿಸಿಕೊಳ್ಳಿ. ಜೊತೆಗೆ ಅದರಲ್ಲಿನ ಸಕ್ಕರೆ ಪ್ರಮಾಣವನ್ನು ಪರಿಗಣಿಸಿ ಅದು ನಿಮ್ಮ ದೈನಂದಿನ ಸಕ್ಕರೆ ಪ್ರಮಾಣದ ಸೇವನೆಗೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ಚಿಂತಿಸಿ ಎಂದು ವಾಹಿ ಹೇಳಿದ್ದಾರೆ.