ಲಖ್ನೋ: ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಪ್ರಚಂಡ ಗೆಲುವು ಸಿಕ್ಕಿದೆ. ಇದೇ ವೇಳೆ ಸಿಎಂ ಯೋಗಿ ಆದಿತ್ಯನಾಥ್ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಚಂಡ ಗೆಲುವು ಸಿಕ್ಕಿದೆ. ಬಿಜೆಪಿ ಬೆಂಬಲಿಸಿದ ಉತ್ತರ ಪ್ರದೇಶದ ಜನರಿಗೆ ಧನ್ಯವಾದಗಳು. ಗೆಲುವಿಗೆ ಶ್ರಮಿಸಿದ ಬಿಜೆಪಿ ಕರ್ತರಿಗೆ ಧನ್ಯವಾದಗಳು ಎಂದು ಲಖ್ನೋ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆ ವೇಳೆ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಸಿಎಂ ಯೋಗಿ ಆದಿತ್ಯನಾಥ್ ಭಾಷಣ ಮಾಡಿದ್ದಾರೆ.
ಬಿಜೆಪಿ ನಾಯಕರಿಗೆ ಧನ್ಯವಾದ ಹೇಳಿದ ಅವರು, ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಕಾರ್ಯಕರ್ತರ ಶ್ರಮ ಮಹತ್ವದ್ದಾಗಿದೆ. ಮೋದಿ ನೇತೃತ್ವದಲ್ಲಿ 4 ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಿದೆ. ಪ್ರಚಂಡ ಬಹುಮತದೊಂದಿಗೆ ಉತ್ತರಪ್ರದೇಶದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲಿದೆ. ಇದು ಮೋದಿ ವಿಕಾಸ ಮತ್ತು ಸುಭದ್ರ ಆಡಳಿತಕ್ಕೆ ಸಂದ ಜಯವಾಗಿದೆ. ಚುನಾವಣೆಗಾಗಿ ಮೋದಿ ಸಂಪೂರ್ಣ ಸಮಯ ನೀಡಿದ್ದರು. ಮುಂದೆಯೂ ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇವೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ರಾಜ್ಯದ ವೈಶಾಲ್ಯತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲರೂ ಯುಪಿ ಮೇಲೆ ಕಣ್ಣಿಟ್ಟಿದ್ದರು. ನಮ್ಮನ್ನು ಬಹುಮತದಿಂದ ಗೆಲ್ಲಿಸಿರುವ ಜನರಿಗೆ ನಾನು ಕೃತಜ್ಞನಾಗಿದ್ದೇನೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಾವು ಯುಪಿ, ಗೋವಾ, ಮಣಿಪುರ ಮತ್ತು ಉತ್ತರಾಖಂಡದಲ್ಲಿ ಸರ್ಕಾರವನ್ನು ರಚಿಸುತ್ತೇವೆ ಎಂದು ಹೇಳಿದ್ದಾರೆ.