
ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ. ಯೋಗೇಶ್ವರ್ ಸೋತರೆ ನಾನೇ ಸೋತಂತೆ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನೇ ಚನ್ನಪಟ್ಟಣದ ಕ್ಷೇತ್ರದ ಅಭ್ಯರ್ಥಿ ಎಂದು ಈ ಹಿಂದೆ ಹೇಳಿಕೆ ನೀಡಿದ್ದೆ. ಈಗಲೂ ಹೇಳುತ್ತೇನೆ. ಚನ್ನಪಟ್ಟಣದಲ್ಲಿ ನಂದೇ ಮುಖ, ನಾನೇ ಅಭ್ಯರ್ಥಿ ಎಂದು ಹೇಳಿದ್ದೆ. ನಾನೇ ಬಿ ಫಾರಂ ಕೊಟ್ಟಿರುವುದು. ಚನ್ನಪಟ್ಟಣದಲ್ಲಿ ಯೋಗೇಶ್ವರ್ ಸೋತರೆ ನಾನೇ ಸೋತಂತೆ ಎಂದು ಹೇಳಿದ್ದಾರೆ.
ನನ್ನ ನೇತೃತ್ವದಲ್ಲಿ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ನಡೆದಿದೆ. ಮತದಾನೋತ್ತರ ಸಮೀಕ್ಷೆಗೆ ವಿರುದ್ಧವಾಗಿ ಫಲಿತಾಂಶ ಬರುವ ವಿಶ್ವಾಸವಿದೆ. ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಾವು ಗೆಲ್ಲುವುದು ನಿಶ್ಚಿತ ಎಂದು ಹೇಳಿದ್ದಾರೆ.