ಬೆಂಗಳೂರು: ಇತ್ತೀಚೆಗಷ್ಟೇ ನಾಯಕತ್ವ ಬದಲಾವಣೆಯ ಬಗ್ಗೆ ಧ್ವನಿಯೆತ್ತಿದ, ಬಂಡಾಯ ಬಾವುಟ ಹಾರಿಸಲು ಮುಂದಾಗಿದ್ದ ಸಚಿವ ಸಿ.ಪಿ. ಯೋಗೇಶ್ವರ್ ಗೆ ವಿರುದ್ಧ ಸಿಐಡಿಗೆ ದೂರು ನೀಡಲಾಗಿದೆ.
ಮೆಗಾಸಿಟಿ ಡೆವಲಪರ್ಸ್ ಕಂಪನಿ ಗ್ರಾಹಕರಿಗೆ ವಂಚಿಸಿದ ಆರೋಪದ ಮೇಲೆ ಅವರ ವಿರುದ್ಧ ಕ್ರಮ ಜರುಗಿಸಿ ಗ್ರಾಹಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಮೆಗಾಸಿಟಿ ನಿವೇಶನ ಸದಸ್ಯರ ಹಿತರಕ್ಷಣಾ ಸಮಿತಿ ಅಧ್ಯಕ್ಷ ರವೀಂದ್ರ ಬೆಳೆಯೂರು ದೂರು ನೀಡಿದ್ದಾರೆ.
ಸಿಐಡಿ ಪೊಲೀಸ್ ಮಹಾನಿರ್ದೇಶಕರಿಗೆ ಈ ಕುರಿತಾಗಿ ದೂರು ನೀಡಿದ್ದು, 1995 ರಿಂದ 2000 ಅವಧಿಯಲ್ಲಿ 9000 ಜನರಿಂದ 70 ಕೋಟಿ ರೂಪಾಯಿ ಸಂಗ್ರಹಿಸಿ ವಂಚಿಸಿದ ಆರೋಪ ಮೆಗಾಸಿಟಿ ಡೆವಲಪರ್ಸ್ ಮೇಲಿದೆ. ಅನೇಕ ವರ್ಷಗಳಿಂದ ವಂಚನೆಗೆ ಒಳಗಾದವರಿಗೆ ನ್ಯಾಯ ಸಿಗುತ್ತಿಲ್ಲ. ಗ್ರಾಹಕರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಮನವಿ ಮಾಡಿದ್ದಾರೆ.
ಬಂಡಾಯ ಬಾವುಟ ಹಾರಿಸಲು ಮುಂದಾಗಿದ್ದ ಯೋಗೇಶ್ವರ್ ವಿರುದ್ಧ ಯಡಿಯೂರಪ್ಪ ಬೆಂಬಲಿಗರು ಕಿಡಿಕಾರಿದ್ದರು. ಶಾಸಕ ರೇಣುಕಾಚಾರ್ಯ ಕೊರೋನಾ ಮುಗಿಯುತ್ತಿದ್ದಂತೆ ಮೆಗಾಸಿಟಿ ಡೆವಲಪರ್ಸ್ ವಂಚನೆ ಪ್ರಕರಣ ಬಯಲಿಗೆಳೆಯಲು ದೂರು ನೀಡುವುದಾಗಿ ಹೇಳಿದ್ದಾರೆ.