
ಚಿಕ್ಕಬಳ್ಳಾಪುರ: ಯೋಗ ಶಿಕ್ಷಕಿಯನ್ನು ಬೆಂಗಳೂರಿನಿಂದ ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದು, ಅರಬೆತ್ತಲೆಗೊಳಿಸಿ ಜೀವಂತವಾಗಿ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ದಿಬ್ಬೂರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಡಿಟೆಕ್ಟಿವ್ ಏಜೆನ್ಸಿ ಮಾಲಿಕ ಸತೀಶ್ ರೆಡ್ಡಿ, ರಮಣ, ಸಲ್ಮಾನ್, ರವಿ ಬಂಧಿತ ಆರೋಪಿಗಳಾಗಿದ್ದಾರೆ.
ಮೂಲತಃ ದೇವನಹಳ್ಳಿ ತಾಲೂಕಿನವರಾದ ಯೋಗ ಶಿಕ್ಷಕಿ ಮದುವೆಯಾಗಿ ಪತಿಯಿಂದ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಶಿಕ್ಷಕಿಯ ಬಳಿಗೆ ಸತೀಶ ರೆಡ್ಡಿ ಯೋಗ ಕಲಿಯಲು ಹೋಗುತ್ತಿದ್ದ. ಯೋಗ ಶಿಕ್ಷಕಿಯ ಕೊಲೆಗೆ ಆಕೆಯ ಪ್ರಿಯಕರ ಸಂತೋಷ್ ಕುಮಾರ್ ಪತ್ನಿ ಸುಪಾರಿ ನೀಡಿದ್ದರು ಎನ್ನಲಾಗಿದೆ.
ಪಡೆದುಕೊಂಡಿದ್ದ ಸತೀಶ್ ರೆಡ್ಡಿ ಮತ್ತು ಸಹಚರರು ಅಕ್ಟೋಬರ್ 23ರಂದು ಯೋಗ ಶಿಕ್ಷಕಿಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ನಂತರ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ. ಶಿಕ್ಷಕಿ ಮೃತಪಟ್ಟಿದ್ದಾಳೆಂದು ಭಾವಿಸಿ ಗುಂಡಿ ತೋಡಿ ಆಕೆಯ ಮೇಲೆ ಮರದ ಕೊಂಬೆಗಳನ್ನು ಹಾಕಿ ಪರಾರಿಯಾಗಿದ್ದಾರೆ. ಸತ್ತಂತೆ ನಟಿಸಿದ್ದ ಯೋಗ ಶಿಕ್ಷಕಿ ದುಷ್ಕರ್ಮಿಗಳು ಹೋದ ನಂತರ ಗುಂಡಿಯಿಂದ ಹೊರಗೆ ಬಂದಿದ್ದಾರೆ.
ನಂತರ ಅವರು ಸ್ಥಳೀಯರಿಂದ ಬಟ್ಟೆ ಪಡೆದು ದಿಬ್ಬೂರಹಳ್ಳಿ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಕೊಲೆ ಯತ್ನ, ಅಪಹರಣ, ಅತ್ಯಾಚಾರಕ್ಕೆ ಯತ್ನ ಸೇರಿ ಹಲವು ಪ್ರಕರಣಗಳ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.