
ಬೆಂಗಳೂರು: ಇಂದು 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ಎರಡು ವರ್ಷದ ನಂತರ ಜಾಗತಿಕವಾಗಿ ಬಹಿರಂಗ ಯೋಗ ದಿನಾಚರಣೆ ನಡೆಸಲಾಗುತ್ತಿದೆ. ಮೈಸೂರು ಅರಮನೆ ಮುಂದೆ ದೇಶದ ಪ್ರಧಾನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗಿಯಾಗಿರುವ ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ಯೋಗಾಭ್ಯಾಸ ಮಾಡಲಿದ್ದಾರೆ.
ನಿನ್ನೆಯೇ ಮೈಸೂರಿಗೆ ಆಗಮಿಸಿರುವ ಮೋದಿ ಬೆಳಗ್ಗೆ 7 ರಿಂದ 7.45 ರವರೆಗೆ ಯೋಗ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. ನಂತರ ಯೋಗ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಲಿದ್ದಾರೆ.
ಕೇಂದ್ರ ಆಯುಷ್ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಪಾಲರ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನೋವಾಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ರಾಮದಾಸ್, ನಾಗೇಂದ್ರ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.