ಹಾವೇರಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಕೃಷಿ ಸಚಿವ ಬಿ.ಸಿ. ಪಾಟೀಲ್ ಹಿರೇಕೆರೂರು ಬಯಲು ಬಸವದೇವರ ದೇವಸ್ಥಾನದ ಪ್ರಾಂಗಣದಲ್ಲಿ ಯೋಗ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯೋಗ ಎನ್ನುವುದು ನಮ್ಮ ದೇಶದ ಪ್ರಾಚೀನ ಪದ್ಧತಿಯಾಗಿದ್ದು, ಯೋಗದ ಮಹತ್ವ ಇಡೀ ವಿಶ್ವಕ್ಕೆ ಸಾರಿದೆ. ಯೋಗವು ಭಾರತೀಯ ಮೂಲದ ಸುಮಾರು 6 ಸಾವಿರ ವರ್ಷ ಹಳೆಯದಾದ ಭೌತಿಕ, ಮಾನಸಿಕ, ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ಸಂಸ್ಥೆಯ ತಮ್ಮ ಭಾಷಣದಲ್ಲಿ ವರ್ಷದ ಅತಿ ದೀರ್ಘ ದಿನವಾದ ಜೂನ್ 21 ರಂದು ವಿಶ್ವ ಯೋಗ ದಿನ ಆಚರಿಸುವಂತೆ ಕರೆ ನೀಡಿದರು. ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ಹೊಸದಿಲ್ಲಿಯ ರಾಜಪಥ್‌ನಲ್ಲಿ ನಡೆಸಲು ಭಾರತ ಸರ್ಕಾರ ಕಾರ್ಯಕ್ರಮ ರೂಪಿಸಿತ್ತು ಎಂದರು.
ಯೋಗ ಒಂದು ದಿನದ ಆಚರಣೆಯಾಗದೇ ದೈನಂದಿನ ಭಾಗವಾಗಬೇಕು. ಯೋಗದಿಂದ ಫಿಟ್ ಎಂಡ್ ಫೈನ್ ಆಗಿರಬಹುದು. ಸದೃಢ ಆರೋಗ್ಯದ ಗುಟ್ಟು ಇದಾಗಿದ್ದು, ಮಾನಸಿಕ ಸ್ಥೈರ್ಯಕ್ಕೆ ಯೋಗ ಸಾಧನವಾಗಿದೆ. ಪ್ರತಿದಿನ 15 ನಿಮಿಷ ಒಂದೆರಡು ಆಸನವನ್ನಾದರೂ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಅರ್ಚಕರಾದ ನಿಂಗಾಚಾರ್ ಮಾಯಾಚಾರ್ ನೇತೃತ್ವದಲ್ಲಿ ಯೋಗ ದಿನಾಚರಣೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಶಿವಕುಮಾರ್ ತಿಪ್ಪಶೆಟ್ಟಿ, ಕಂಠಾಧರ ಅಂಗಡಿ, ರಮೇಶ್, ಕುಸುಮ ಬಣಕಾರ್, ಲತಾ ಬಣಕಾರ್ ಮತ್ತಿತ್ತರರು ಪಾಲ್ಗೊಂಡಿದ್ದರು.