ಮದುವೆ ಆಗಿ ಮೂರು ತಿಂಗಳಾಗಿತ್ತಷ್ಟೆ. ಇನ್ನೂ ಅವರ ವಿವಾಹದ ಆಲ್ಬಂ ಕೈ ಸೇರಿಲ್ಲ. ಅಷ್ಟರಲ್ಲೇ ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಉಗ್ರನ ಗುಂಡಿಗೆ ಬಲಿಯಾದವರು ರಾಜಸ್ಥಾನ ಮೂಲದ ವಿಜಯಕುಮಾರ್ ಬೇನಿವಾಲ್ (26).
ವಿಜಯಕುಮಾರ್ ತಂದೆ ಓಂ ಪ್ರಕಾಶ್ ಬೇನಿವಾಲ್ ಉಗ್ರ ಕೃತ್ಯದ ಬಗ್ಗೆ ಪ್ರತಿಕ್ರಿಯಿಸಿದ ವೇಳೆ ಈ ವಿಚಾರ ಬಹಿರಂಗಪಡಿಸಿದರು.
“ಮೂರು ತಿಂಗಳ ಹಿಂದಷ್ಟೇ ಮದುವೆ ಆಗಿದ್ದ. ಇನ್ನೂ ಅವನ ಮದುವೆ ಆಲ್ಬಂ ಕೈ ಸೇರಿಲ್ಲ. ಅಷ್ಟರಲ್ಲಿ ಹೀಗಾಗಿದೆ” ಎಂದು ದುಃಖದಿಂದ ಹೇಳಿದ್ದಾರೆ.
ರಾಜಸ್ಥಾನದ ಹನುಮಾನ್‌ಗಢ್ ಜಿಲ್ಲೆಯ ಭಗವಾನ್ ಗ್ರಾಮದ ವಿಜಯ್ ಕುಮಾರ್, ಕುಲ್ಗಾಮ್‌ನ ಎಲ್ಲಕ್ವಾಯ್ ದೇಹತಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯರಲ್ಲದವರ ಮೇಲೆ ನಡೆದ ದಾಳಿಗಳ ನಡುವೆಯೇ ಅವರ ಹತ್ಯೆಯಾಗಿದೆ, ಇದು ಒಂದು ವಾರದೊಳಗೆ ಎರಡನೇ ನಾಗರಿಕ ದಾಳಿಯಾಗಿದೆ.
“ನಾನು ರಾತ್ರಿ ವಿಜಯ್ ಜತೆ ಮಾತನಾಡಿದ್ದೆ. ಇಂದು ಬೆಳಗ್ಗೆ 11 ಗಂಟೆಗೆ ನಾನು ಊಟ ಮಾಡುತ್ತಿದ್ದಾಗ ಯಾರೋ ಒಬ್ಬರು ನನಗೆ ಕರೆ ಮಾಡಿ ವಿಜಯ್ ಕುಮಾರ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಟಿವಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದೆ ಎಂದು ಹೇಳಿದರು. ನಾನು ತಕ್ಷಣ ಟಿವಿ ಆನ್ ಮಾಡಿ ನೋಡಿದೆ. ಆಘಾತವಾಯಿತು” ಎಂದು ಓಂ ಪ್ರಕಾಶ್ ಹೇಳಿದರು.
ಫೆಬ್ರವರಿ 10ರಂದು ಅವರ ವಿವಾಹವಾಗಿತ್ತು. ಇತ್ತೀಚೆಗಷ್ಟೇ ಪತ್ನಿಯನ್ನು ಕರೆದುಕೊಂಡು ಹೋಗಿದ್ದರು. ವಿಜಯ್ ಕುಮಾರ್ ಪತ್ನಿ ರಾಜಸ್ಥಾನ ಶಿಕ್ಷಕರ ಅರ್ಹತಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಜುಲೈ 15 ರೊಳಗೆ ಊರಿಗೆ ಹಿಂತಿರುಗಲು ಯೋಜಿಸುತ್ತಿದ್ದರು.