ಬೆಂಗಳೂರು: ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಪ್ರತ್ಯೇಕ ವಾಯುಭಾರ ಕುಸಿತ ಉಂಟಾಗಿದ್ದು, ಇದರಿಂದ ಮುಂಗಾರು ಆರಂಭಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಹವಾಮಾನ ತಜ್ಞರು ಸ್ಪಷ್ಟಪಡಿಸಿದ್ದಾರೆ.
ಮೇ 31ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು, ನಂತರದ ಒಂದೆರಡು ದಿನಗಳಲ್ಲಿ ಕರ್ನಾಟಕಕ್ಕೆ ಮುಂಗಾರು ಆಗಮನವಾಗಲಿದೆ. ಈಗಾಗಲೇ ನೈರುತ್ಯ ಮುಂಗಾರು ಮಾರುತಗಳು ಚಲನೆ ಆರಂಭಿಸಿವೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮುಂಗಾರಿಗೆ ಇನ್ನಷ್ಟು ಅನುಕೂಲಕರವಾಗಿದೆ.
ಅರಬ್ಬಿ ಸಮುದ್ರದಲ್ಲಿ ರೂಪುಗೊಂಡಿರುವ ಮತ್ತೊಂದು ವಾಯುಭಾರ ಕುಸಿತ ಪ್ರಬಲವಾದಲ್ಲಿ ಮುಂದಿನ ಎರಡು ದಿನ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮೇ 24, 25ರಂದು ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ.