ಬೆಂಗಳೂರು: ಕೊರೋನಾ ಪರಿಹಾರದ ಕುರಿತಾಗಿ ವಿಧಾನಸಭೆಯಲ್ಲಿ ಆಡಳಿತ, ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಲು ನಿಲ್ಲುತ್ತಿದ್ದಂತೆ ಗದ್ದಲದಲ್ಲಿದ್ದ ಸದನ ಸೈಲೆಂಟ್ ಆಗಿದೆ.
ಸರ್ಕಾರ ಕೊರೋನಾ ಸಾವಿನ ಸುಳ್ಳು ಲೆಕ್ಕ ನೀಡಿದವರಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಯಡಿಯೂರಪ್ಪ 1 ಲಕ್ಷ ರೂ. ನೀಡಿದ್ದಾರೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ಘೋಷಣೆ ಆಗಿದೆ, ಇನ್ನು ಹಣ ಕೊಟ್ಟಿಲ್ಲ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
ಈ ವೇಳೆ ಸದನದಲ್ಲಿ ಪರಿಹಾರ ಹಣದ ವಿಚಾರವಾಗಿ ಗದ್ದಲವಾಗಿದ್ದು, ಯಡಿಯೂರಪ್ಪ ಅವರು, ಮೃತರ ಕುಟುಂಬಕ್ಕೆ ಹಣ ತಲುಪಿಲ್ಲ ನಿಜ. ಆದರೆ, ಈಗಾಗಲೇ ಆದೇಶ ಮಾಡಲಾಗಿದೆ. ಇದಕ್ಕಾಗಿ 200 ಕೋಟಿ ರೂಪಾಯಿ ತೆಗೆದಿಡಲಾಗಿದೆ ಎಂದು ಉತ್ತರಿಸಿದ್ದಾರೆ. ಯಡಿಯೂರಪ್ಪ ಮಾತಿನಿಂದ ಸದನದಲ್ಲಿ ಗದ್ದಲ ನಿಂತಿದೆ.
ಕೊರೊನಾದಿಂದ ಮೃತಪಟ್ಟವರಿಗೆ ಹಣ ಸಂದಾಯ ಮಾಡಲಾಗಿದೆ ಎಂದು ಶ್ರೀರಾಮುಲು ಹೇಳಿದಾಗ ಅವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ವಿಪಕ್ಷ ಸದಸ್ಯರು ದೂರಿದ್ದಾರೆ. ಶ್ರೀರಾಮುಲು ಬಾಯಿ ತಪ್ಪಿನಿಂದ ಹಾಗೆ ಹೇಳಿದ್ದು, ಇದನ್ನು ಹೀಗೆಯೇ ಮುಂದುವರೆಸುವುದು ಬೇಡ. ಮೃತರ ಮನೆಗೆ ಹಣ ತಲುಪಿಸುವ ಜವಾಬ್ದಾರಿ ನಮ್ಮದು. ನಾವು ಹಣಕಾಸು ಸಚಿವರ ಜೊತೆ ಮಾತನಾಡಿದ್ದೇನೆ. ಎಂದು ಸದನದಲ್ಲಿ ಯಡಿಯೂರಪ್ಪ ಭರವಸೆ ನೀಡಿದ್ದು ಬಿಎಸ್ವೈ ಮಾತಿನಿಂದ ಸದನದಲ್ಲಿ ಗದ್ದಲಕ್ಕೆ ವಿರಾಮ ಬಿದ್ದಿದೆ.