ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯಿಂದ ಸಂಕಷ್ಟ ಎದುರಾಗಿರುವ ಹೊತ್ತಲ್ಲೇ ಆಡಳಿತಾರೂಢ ಬಿಜೆಪಿ ನಾಯಕತ್ವ ಬದಲಾವಣೆ ಬಗ್ಗೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸ್ಥಳೀಯ ನಾಯಕರು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದು, ವರಿಷ್ಠರು ಮಾತ್ರ ಈ ಚರ್ಚೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೇಳಲಾಗಿದೆ.
ಅನೇಕ ಶಾಸಕರು ನಾಯಕತ್ವ ಬದಲಾವಣೆಗೆ ಒತ್ತಡ ಹೇರತೊಡಗಿದ್ದಾರೆ. ಅತೃಪ್ತರ ಗುಂಪಿನ ಸದಸ್ಯರು ಅನೇಕ ಸಲ ದೆಹಲಿ ಪ್ರವಾಸ ಮಾಡಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ವರಿಷ್ಠರ ಗಮನಕ್ಕೆ ತರುವ ಪ್ರಯತ್ನ ನಡೆಸಿದ್ದಾರೆ. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದ ಸಿಎಂ ಯಡಿಯೂರಪ್ಪ ತಮ್ಮ ತಂಡದೊಂದಿಗೆ ಕೊರೋನಾ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನು ಸಚಿವ ಯೋಗೇಶ್ವರ್ ನಾಯಕತ್ವ ಬದಲಾವಣೆ ಬಗ್ಗೆ ದೆಹಲಿಗೆ ಹೋಗಿ ಬಂದಿದ್ದಾರೆ ಎನ್ನಲಾಗಿದ್ದು, ಯಡಿಯೂರಪ್ಪನವರ ಬಣ ಯೋಗೇಶ್ವರ್ ಬಗ್ಗೆ ಆಕ್ರೋಶ ಹೊಂದಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಯೋಗೇಶ್ವರ್ ಅವರಿಗೆ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನವನ್ನು ನೀಡಲಾಗಿದೆ. ಹೀಗಿದ್ದರೂ ಅವರು ಬಂಡಾಯದ ಪ್ರಯತ್ನ ನಡೆಸಿದ್ದು, ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂಬ ಒತ್ತಡ ಕೇಳಿ ಬಂದಿದೆ. ನಾಯಕತ್ವ ಬದಲಾವಣೆ ಮಾಡಿದರೆ ಯಾರಿಗೆ ನಾಯಕತ್ವ ವಹಿಸಬೇಕೆಂಬ ಚರ್ಚೆ ಕೂಡ ನಡೆದಿದ್ದು, ಹಲವರ ಹೆಸರುಗಳನ್ನು ತೇಲಿ ಬಿಡಲಾಗಿದೆ. ಸಿಎಂ ಮಾತ್ರ ಇದರ ಬಗ್ಗೆ ಗಮನಹರಿಸದೇ ಕೊರೋನಾಗೆ ಕಡಿವಾಣ ಹಾಕಲು ಸರ್ಕಾರವನ್ನು ಸಕ್ರಿಯವಾಗಿ ಮುನ್ನಡೆಸುತ್ತಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಾವಣೆಗೆ ಭಿನ್ನರು ತೀವ್ರ ಒತ್ತಡ ಹೇರುತ್ತಿದ್ದರೂ, ಬಿಜೆಪಿ ಹೈಕಮಾಂಡ್ ಮಾತ್ರ ಅಂತಹ ಯೋಚನೆ ಮಾಡಿಲ್ಲ. ರಾಜ್ಯದ ಬಿಜೆಪಿ ಬೆಳವಣಿಗೆಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಹಿತಿ ಪಡೆದುಕೊಂಡಿದ್ದು, ಈಗಿನ ಪರಿಸ್ಥಿತಿಯಲ್ಲಿ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಎನ್ನಲಾಗಿದೆ.