ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡ್ತಾರೆ ಎಂಬ ವಿಚಾರವೇ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿಬಿಟ್ಟಿದೆ. ಸಿಎಂ ಯಡಿಯೂರಪ್ಪ ಈಗಾಗಲೇ ಜುಲೈ 25ರಂದು ಹೈಕಮಾಂಡ್ನಿಂದ ಸೂಚನೆ ಸಿಗಲಿದೆ. ಅದರಂತೆ ಜುಲೈ 26ರಂದು ನಡೆದುಕೊಳ್ಳುತ್ತೇನೆ ಎಂದೂ ಹೇಳಿಬಿಟ್ಟಿದ್ದಾರೆ. ಹೀಗಾಗಿ ಯಡಿಯೂರಪ್ಪರ ರಾಜೀನಾಮೆ ಫಿಕ್ಸ್ ಅನ್ನೋದನ್ನ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಬರೋಬ್ಬರಿ ನಾಲ್ಕು ಬಾರಿ ಸಿಎಂ ಆಗಿರುವ ಯಡಿಯೂರಪ್ಪ ಈ ಬಾರಿಯ ಅಧಿಕಾರಾವಧಿಯಲ್ಲಿ 2 ವರ್ಷಗಳನ್ನ ಪೂರೈಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆ ನಡೆಯಲು ಇನ್ನೂ ಸಮಯವಿದೆ. ಈ ನಡುವೆ ಯಡಿಯೂರಪ್ಪ ರಾಜೀನಾಮೆ ಏಕೆ..? ಈ ಬಾರಿ ಸಂಪೂರ್ಣ ಅಧಿಕಾರಾವಧಿಯನ್ನ ಯಡಿಯೂರಪ್ಪರಿಗೆ ನೀಡಿ ಮುಂದಿನ ಬಾರಿ ಸಿಎಂ ಬದಲಾವಣೆ ಮಾಡಹುದಿತ್ತಲ್ಲವೇ..? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಆದರೆ ಈ ರೀತಿ ಮಧ್ಯಂತರದಲ್ಲಿ ಯಡಿಯೂರಪ್ಪ ಬಳಿ ಹೈಕಮಾಂಡ್ ರಾಜೀನಾಮೆ ಕೇಳ್ತಿರೋದ್ರ ಹಿಂದೆಯೂ ಬಲವಾದ ಕಾರಣ ಇದೆ ಎನ್ನಲಾಗಿದೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯ ಹೆಸರೇ ಪಕ್ಷಕ್ಕೆ ನೆಗೆಟಿವ್ ಎಫೆಕ್ಟ್ ಕೊಡಬಾರದು ಅನ್ನೋದು ಬಿಜೆಪಿ ವರಿಷ್ಠರ ಪ್ಲಾನ್. ಹೀಗಾಗಿ ಇನ್ನೂ ಅಧಿಕಾರಾವಧಿ ಬಾಕಿ ಇರುವಾಗಲೇ ಯಡಿಯೂರಪ್ಪರ ಸ್ಥಾನವನ್ನ ಇನ್ನೊಬ್ಬರಿಗೆ ನೀಡಿದರೆ ಮುಂದಿನ ಚುನಾವಣೆಯೊಳಗಾಗಿ ಕರ್ನಾಟಕ ಜನತೆಯ ವಿಶ್ವಾಸವನ್ನ ಗಳಿಸಿಕೊಳ್ಳಲು ಬಿಜೆಪಿಗೆ ಸಮಯ ಸಿಕ್ಕಂತೆ ಆಗುತ್ತೆ. ಮುಂದಿನ ಚುನಾವಣೆ ಬರೋದ್ರೊಳಗೆ ಬಿಎಸ್ವೈ ಅಭಿಮಾನಿಗಳ ಆಕ್ರೋಶ ಕೂಡ ತಣ್ಣಗಾಗಿರುತ್ತದೆ. ಸಿಎಂ ಬದಲಾವಣೆಯ ನೆಗೆಟಿವ್ ಎಫೆಕ್ಟ್ ಯಾವುದೇ ಕಾರಣಕ್ಕೂ ಮುಂದಿನ ಚುನಾವಣೆ ಬೀಳಲೇಬಾರದು ಎಂಬ ಕಾರಣಕ್ಕೆ ಈ ರೀತಿ ಮಧ್ಯಂತರದಲ್ಲಿ ಯಡಿಯೂರಪ್ಪ ಬಳಿ ರಾಜೀನಾಮೆ ಕೇಳಲಾಗಿದೆ ಎನ್ನಲಾಗಿದೆ.
ಏನಾಗಲಿದೆ ಯಡಿಯೂರಪ್ಪ ಭವಿಷ್ಯ..?
78 ವರ್ಷದ ಯಡಿಯೂರಪ್ಪ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೊಸ ಗುರುತನ್ನೇ ತಂದುಕೊಟ್ಟ ಹಿರಿಯ ನಾಯಕ. ಯಡಿಯೂರಪ್ಪರ ರಾಜೀನಾಮೆಯ ಬಳಿಕ ಅವರ ಭವಿಷ್ಯ ಏನಾಗಬಹುದು ಎಂದು ಆತಂಕ ಯಡಿಯೂರಪ್ಪ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಹಿಡಿತ ಸಾಧಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗ್ತಾರಾ ಅಥವಾ ಅಡ್ವಾಣಿಯಂತೆಯೇ ಮೂಲೆಗುಂಪಾಗ್ತಾರಾ ಎಂಬ ಪ್ರಶ್ನೆ ಕೂಡ ಮೂಡಿದೆ. ಅಭಿಮಾನಿಗಳ ಈ ಎಲ್ಲಾ ಆತಂಕಕ್ಕೆ ಕಾಲವೇ ಉತ್ತರ ನೀಡಬೇಕಿದೆ.